ಫಾರ್ಮುಲಾಗಳ ಹಿಂದೆ ಓಡದೇ, ಕಥೆಗಳನ್ನು ಕಟ್ಟುವ ಪ್ರಯತ್ನವೇ ತಮ್ಮ ಸಿನಿಮಾಗಳ ಮೂಲ ತತ್ವ ಎಂದು ಹೇಳುವ ನಿರ್ದೇಶಕ ಸಂತೋಷ್ ಕೊಡೆಂಕೇರಿ, ರವಿಕೆ ಪ್ರಸಂಗ ಚಿತ್ರದ ನಂತರ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ.
ಈ ಬಾರಿ ಅವರು ಉತ್ತರ ಕರ್ನಾಟಕದ ಬದುಕು, ಸಂಸ್ಕೃತಿ ಮತ್ತು ದೈನಂದಿನ ಜೀವನವನ್ನು ಆಧರಿಸಿದ ಸಾಮಾಜಿಕ ಕಾಮಿಡಿ-ಡ್ರಾಮಾ ಚಿತ್ರವನ್ನು ರೂಪಿಸುತ್ತಿದ್ದಾರೆ.
ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಅವರ ಪತ್ನಿ ಹಾಗೂ ಲೇಖಕಿ ಪಾವನಾ ಸಂತೋಷ್ ಬರೆಯುತ್ತಿದ್ದಾರೆ. ಸಾಮಾನ್ಯ ಬದುಕಿನ ಸನ್ನಿವೇಶಗಳು, ಪರಿಚಿತ ಪಾತ್ರಗಳು ಮತ್ತು ದಿನನಿತ್ಯದ ಅನುಭವಗಳ ಮೂಲಕ ಕಥೆಯನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಿದೆ. ಸ್ಕ್ರಿಪ್ಟ್ ಕುರಿತು ಲಭ್ಯವಿರುವ ಆರಂಭಿಕ ಮಾಹಿತಿಯ ಪ್ರಕಾರ, ಉತ್ತರ ಕರ್ನಾಟಕದ ಸಾಮಾಜಿಕ ವಾತಾವರಣ, ಸಾಂಸ್ಕೃತಿಕ ಆಚರಣೆಗಳು ಹಾಗೂ ನೈಸರ್ಗಿಕ ಸೌಂದರ್ಯ ಈ ಚಿತ್ರದ ಪ್ರಮುಖ ಅಂಶಗಳಾಗಿವೆ.
ಚಿತ್ರದ ಕುರಿತು ಮಾತನಾಡುವ ಸಂತೋಷ್ ಕೊಡೆಂಕೇರಿ, ವಿಷಯಕ್ಕೆ ನಿಷ್ಠರಾಗಿರುವುದೇ ತಮ್ಮ ಮೊದಲ ಆದ್ಯತೆ ಎನ್ನುತ್ತಾರೆ.
“ನಾವು ಫಾರ್ಮುಲಾಗಳ ಹಿಂದೆ ಓಡೋದಿಲ್ಲ, ಕಥೆಗಳನ್ನು ಕಟ್ಟುತ್ತೇವೆ. ವಿಷಯಾಧಾರಿತ ಸಿನಿಮಾ ಮಾಡೋದಕ್ಕೆ ಧೈರ್ಯ ಬೇಕು—ನಿಜವಾದ ಕಥೆಗಳನ್ನು ಹೇಳುವ, ಕಠಿಣ ಪ್ರಶ್ನೆಗಳನ್ನು ಕೇಳುವ ಮತ್ತು ಪ್ರೇಕ್ಷಕರ ಮನಸ್ಸಿಗೆ ತಲುಪುವ ಧೈರ್ಯ. ಅದೇ ನಾನು ಮಾಡಬೇಕೆನ್ನುವ ಸಿನಿಮಾ” ಎಂದು ಅವರು ಹೇಳಿದರು.
ಅತಿರಂಜಿತ ದೃಶ್ಯಗಳು ಮತ್ತು ಗಿಮಿಕ್‌ಗಳ ಬದಲು, ಮಾನವೀಯ ಕ್ಷಣಗಳು, ಸ್ಥಳೀಯ ಸಂಪ್ರದಾಯಗಳು ಮತ್ತು ಉತ್ತರ ಕರ್ನಾಟಕದ ಬದುಕಿನ ನೈಜ ಸೌಂದರ್ಯದಿಂದಲೇ ಈ ಚಿತ್ರ ತನ್ನ ಬಲ ಪಡೆಯುತ್ತದೆ. ಪ್ರೇಕ್ಷಕರು ತಮ್ಮದೇ ಬದುಕಿನ ಪ್ರತಿಬಿಂಬವನ್ನು ಪರದೆಯ ಮೇಲೆ ಕಾಣುವಂತೆ ಮಾಡುವುದೇ ಚಿತ್ರದ ಉದ್ದೇಶ.
ಲೇಖಕಿ ಪಾವನಾ ಸಂತೋಷ್ ಕುರಿತು ಮಾತನಾಡಿದ ನಿರ್ದೇಶಕರು, ಕಥೆಗೆ ಭಾವನಾತ್ಮಕ ಸಮತೋಲನ ತರುವಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖ ಎನ್ನುತ್ತಾರೆ. ಹಾಸ್ಯದ ಲಘು ಕ್ಷಣಗಳು ಮತ್ತು ಸಾಮಾಜಿಕ ಅವಲೋಕನದ ನಡುವೆ ಸಮತೋಲನ ಸಾಧಿಸುವ ರೀತಿಯಲ್ಲಿ ಕಥೆಯನ್ನು ಅವರು ರೂಪಿಸಿದ್ದಾರೆ ಎಂದು ಚಿತ್ರತಂಡ ನಂಬಿದೆ. ಕುಟುಂಬ ಪ್ರೇಕ್ಷಕರು, ಯುವಜನರು ಹಾಗೂ ವಿಷಯಾಧಾರಿತ ಸಿನಿಮಾಗಳನ್ನು ಮೆಚ್ಚುವ ಪ್ರಾದೇಶಿಕ ಪ್ರೇಕ್ಷಕರಿಗೆ ಈ ಚಿತ್ರ ಖಂಡಿತವಾಗಿ ತಲುಪಲಿದೆ ಎಂಬ ವಿಶ್ವಾಸವೂ ತಂಡಕ್ಕಿದೆ.
ಇದರೊಂದಿಗೆ, ನಿರ್ಮಾಣ ಸಂಸ್ಥೆ ಉತ್ತರ ಕರ್ನಾಟಕದ ನಟರು ಮತ್ತು ನಟಿಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಆಯ್ಕೆ ಪ್ರಕ್ರಿಯೆಗೆ ಆಹ್ವಾನ ನೀಡಿದೆ. ಸ್ಥಳೀಯ ಪ್ರತಿಭೆಗಳು ಮತ್ತು ಹೊಸ ಮುಖಗಳು ಚಿತ್ರದ ನೈಜತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂಬುದು ನಿರ್ಮಾತೃಗಳ ಅಭಿಪ್ರಾಯ.
ಪ್ರಸ್ತುತ ಚಿತ್ರವು ಪೂರ್ವ ತಯಾರಿ ಹಂತದಲ್ಲಿದ್ದು, ಮುಂದಿನ ಹಂತದ ಚಿತ್ರೀಕರಣದತ್ತ ತಂಡ ಸಿದ್ಧಗೊಳ್ಳುತ್ತಿದೆ. ಪಾತ್ರಗಳ ಆಯ್ಕೆ ಮತ್ತು ಚಿತ್ರೀಕರಣ ವೇಳಾಪಟ್ಟಿಯ ಕುರಿತು ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.


