ಛತ್ತೀಸ್ಗಢದ ಸುಕ್ಮಾದಲ್ಲಿ 29 ನಕ್ಸಲರು ಪೊಲೀಸರ ಮುಂದೆ ಬುಧವಾರ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಗಳಿಂದ ಪ್ರೇರಿತಗೊಂಡು ಅವರು ಶರಣಾಗಿದ್ದಾರೆ. ಶರಣಾದವರಲ್ಲಿ ಗೋಗುಂಡ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಾನ್ ಮುಖ್ಯಸ್ಥ ಪೋಡಿಯಂ ಬುಧ್ರಾ ಇದ್ದು, ಇವರನ್ನು ಹುಡುಕಿಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ನಿಷೇಧಿತ ಮಾವೋವಾದಿ ಸಂಘಟನೆಗಳ ಸಕ್ರಿಯ ಸದಸ್ಯರಾಗಿರುವ 29 ಮಂದಿ, ಪೂನಾ ಮಾರ್ಗೆಮ್ (ಪುನರ್ವಸತಿಯಿಂದ ಸಾಮಾಜಿಕ ಪುನರ್ಜೋಡಣೆಯವರೆಗೆ) ಉಪಕ್ರಮದಡಿ ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಗೋಗುಂಡು ಪ್ರದೇಶದಲ್ಲಿ ಇತ್ತೀಚಿಗೆ ಭದ್ರತಾ ಶಿಬಿರವನ್ನು ಸ್ಥಾಪಿಸಲಾಗಿದ್ದು, ಈ ಕ್ರಮ ಕೂಡ ಶರಣಾಗತಿಯಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಈ ಶಿಬಿರ ರಚನೆ ಬಳಿಕ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಸುಸ್ಥಿರ ಒತ್ತಡ ಮತ್ತು ನಿರಂತರ ಶೋಧ ಕಾರ್ಯಾಚರಣೆ ಈ ಪ್ರದೇಶದಲ್ಲಿನ ಮಾವೋವಾದಿಗಳ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಗೋಗುಂಡು ಪ್ರದೇಶ ದುರ್ಗಮ ಹಾಗೂ ದೂರದಲ್ಲಿರುವ ಇಲ್ಲಿ ಭದ್ರತಾ ಶಿಬಿರವನ್ನು ಸ್ಥಾಪಿಸಿದ ನಂತರ, ಮಾವೋವಾದಿಗಳ ಭದ್ರಕೋಟೆಯನ್ನು ಪರಿಣಾಮಕಾರಿಯಾಗಿ ಭೇದಿಸಲಾಗಿತ್ತು. ಈ ಶರಣಾಗತಿಯೊಂದಿಗೆ, ದರ್ಭಾ ವಿಭಾಗದಲ್ಲಿ ಮಾವೋವಾದಿಗಳ ಬೆಂಬಲ ವ್ಯವಸ್ಥೆಯೂ ದುರ್ಬಲಗೊಂಡಿದೆ ಎಂದು ಅವರು ತಿಳಿಸಿದರು.
ದಂತೇವಾಡ ಜಿಲ್ಲೆಯಲ್ಲಿ ಜನವರಿ 8ರಂದು 63 ಹಾಗೂ ಜನವರಿ 7ರಂದು ಸುಕ್ಮಾದಲ್ಲಿ 26 ಮಾವೋಗಳು ಹಿಂಸಾತ್ಮಾಕ ಪ್ರತಿಭಟನೆ ತೊರೆದು ಪೊಲೀಸರ ಮುಂದೆ ಶರಣಾಗಿದ್ದರು. 2025ರಲ್ಲಿ 1,500ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದು, ಕೇಂದ್ರ ಸರ್ಕಾರವು ಈ ವರ್ಷದ ಮಾರ್ಚ್ 31ರ ಹೊತ್ತಿಗೆ ದೇಶದಿಂದ ನಕ್ಸಲಿಸಂ ಬೇರು ಸಮೇತ ಕಿತ್ತು ಹಾಕುವ ಪಣ ತೊಟ್ಟಿದೆ. ಇದರಿಂದ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡಿದೆ.


