ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯಲ್ಲಿ ಮೊಮ್ಮಗನ ಎದುರೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾತ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಾಕ್ಷಾಯಿಣಮ್ಮ(55) ಎಂಬವರನ್ನು ಶನಿವಾರ ಮಧ್ಯಾಹ್ನ ಕೊಂದು ಪರಾರಿಯಾಗಿದ್ದ ವೀರಭದ್ರಯ್ಯ(60) ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಕ್ಷಾಯಿಣಮ್ಮ ಕೊಲೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಂಗಳವಾರ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದ ಅಕ್ಕನ ಮನೆಗೆ ತಡರಾತ್ರಿ ಬಂದಿದ್ದ ಆರೋಪಿ ಅಕ್ಕನ ಮಾತನಾಡಿಸಿಕೊಂಡು ತೋಟಕ್ಕೆ ಹೋದವನು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊರಗಡೆ ಹೋದವನು ವಾಪಸ್ ಮನೆಗೆ ಬಾರದ ಕಾರಣ ಎಲ್ಲೆಡೆ ಹುಡುಕಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ದಾಕ್ಷಾಯಿಣಮ್ಮ ಅವರ ಪತಿ ನಾಗರಾಜ್ ಎಂಟು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಹಣಕಾಸಿನ ವ್ಯವಹಾರ ಹಾಗೂ ಮನೆ ಬಾಡಿಗೆ ಹಣದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ದಾಕ್ಷಾಯಿಣಮ್ಮ ಮತ್ತು ಮಾವ ವೀರಭದ್ರನ ಜೊತೆ ಹಣಕಾಸಿನ ವ್ಯವಹಾರ ಹಾಗೂ ಭೂ ವ್ಯಾಜ್ಯ ಸಂಬಂಧ ಜಗಳವಾಗಿತ್ತು.
ದಾಕ್ಷಾಯಿಣಮ್ಮ ಮೊಮ್ಮಗನನ್ನು ಶಾಲೆಯಿಂದ ಕರೆತರಲು ಹೊರಟಿದ್ದಾಗ ಬೈಕ್ನಲ್ಲಿ ಬಂದ ವ್ಯಕ್ತಿ ನಡು ರಸ್ತೆಯಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದರು.


