ಮಕರ ಸಂಕ್ರಮಣದ ಜ್ಯೋತಿ ದರ್ಶನಕ್ಕೆ ತೆರಳಿದ್ದ ರಾಜ್ಯದ ಸಾವಿರಾರು ಭಕ್ತರ ವಾಹನಗಳನ್ನು ಕೇರಳ ಪೊಲೀಸರು ತಡೆ ಹಿಡಿದಿದ್ದು, ಪ್ರತಿಭಟಿಸಿದ ರಾಜ್ಯದ ಭಕ್ತರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ.
ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ 5000ಕ್ಕೂ ಅಧಿಕ ಭಕ್ತರು ಖಾಸಗಿ ವಾಹನಗಳ ಮೂಲಕ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದು, ಶಬರಿಮಲೆಯಿಂದ 60 ಕಿ.ಮೀ. ದೂರದ ಎರಿಮಲೆಯಲ್ಲಿ ವಾಹನಗಳನ್ನು ತಡೆ ಹಿಡಿಯಲಾಗಿದೆ.
ಶಬರಿಮಲೆಯಲ್ಲಿ ನೂಕುನೂಗ್ಗಲು ಉಂಟಾಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸುವಂತೆ ನ್ಯಾಯಾಲಯದ ಸೂಚನೆ ಮೇರೆಗೆ ಕೇರಳ ಪೊಲೀಸರು ಕರ್ನಾಟಕದ ನೋಂದಣಿ ಇರುವ ವಾಹನಗಳನ್ನು 60 ಕಿ.ಮೀ. ದೂರದಲ್ಲಿ ತಡೆದು ನಿಲ್ಲಿಸಿದ್ದಾರೆ. ಕೇರಳ ನೋಂದಣಿಯ ವಾಹನಗಳನ್ನು ಬಿಡುತ್ತಿರುವುದು ರಾಜ್ಯದ ಮಾಲಾಧಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳ ಪೊಲೀಸರ ವರ್ತನೆಯನ್ನು ಖಂಡಿಸಿ ರಾಜ್ಯದ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ಮತ್ತು ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ಪೊಲೀಸರು ಲಾಠಿಪ್ರಹಾರ ನಡೆಸಿದ್ದನ್ನು ಖಂಡಿಸಿ ಮಾಲಾಧಾರಿಗಳು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.


