ನಮ್ಮ ರಾಜ್ಯಕ್ಕೆ ಎಸ್ಐಆರ್ ಬರುತ್ತಿದೆ. ಅಧಿಕಾರಿಗಳು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಬಿಎಲ್ಎ ವಿಚಾರದಲ್ಲಿ ಯಾವುದೇ ಮುಲಾಜಿರುವುದಿಲ್ಲ. ನಮ್ಮ ಭವಿಷ್ಯ ತೀರ್ಮಾನವಾಗುವುದೇ ಎಸ್ಐಆರ್ ನಲ್ಲಿ. ಮತದಾರರ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಬಿಎಲ್ಎಗಳು ಎಚ್ಚರಿಕೆಯಿಂದ ಇರಬೇಕು. ನೀವು ಹಕ್ಕನ್ನು ಕಾಪಾಡಿಕೊಳ್ಳಬೇಕು. ನಮ್ಮ ರಾಜ್ಯದಿಂದ ವೋಟ್ ಚೋರಿ ಅಭಿಯಾನ ಆರಂಭವಾಗಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷರಾಗಿರುವ ಡುಇಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವೋಟ್ ಚೋರಿ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ 1.41 ಕೋಟಿ ಸಹಿ ಸಂಗ್ರಹಿಸಿದ ಎಲ್ಲಾ ಜಿಲ್ಲಾಧ್ಯಕ್ಷರು, ಶಾಸಕರು, ಪದಾಧಿಕಾರಿಗಳಿಗೆ ಅಭಿನಂದನೆಗಳು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷ ಉಳಿದರೆ ನಾವು ನೀವುಗಳು, ಪಕ್ಷವಿಲ್ಲವೆಂದರೆ ನಾವುಗಳು ಇರುವುದಿಲ್ಲ ಎಂದರು.
ಅರಮನೆ ಮೈದಾನದಲ್ಲಿ ನಡೆದ “ಮನರೇಗಾ ಬಚಾವ್ ಸಂಗ್ರಾಮ” ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ, ಏಳನೇ ಗ್ಯಾರಂಟಿಯಾಗಿ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಗೃಹಲಕ್ಷ್ಮಿ ಹಣ ಒಂದೆರಡು ತಿಂಗಳು ತಡವಾಗಿರಬಹುದು. ಹಣ ಸಂಗ್ರಹವಾದ ಬಳಿಕ ಎಲ್ಲವನ್ನು ಜಮೆ ಮಾಡಲಾಗುವುದು. ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ. ಫೆ.13ರಂದು ದೊಡ್ಡ ಕಾರ್ಯಕ್ರಮ ಮಾಡಲು ಚರ್ಚೆ ಮಾಡುತ್ತಿದ್ದು, ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಪ್ರತಿ ತಾಲೂಕು, ಪಂಚಾಯಿತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಾಡಬೇಕು ಎಂದು ಕರೆಕೊಟ್ಟರು.
ಗ್ರಾಮೀಣ ಭಾಗದ ಅಭಿವೃದ್ಧಿಗೆ ನೆರವಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಂದಿದೆ. ಶ್ರೀಮತಿ ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಸಂವಿಧಾನದ ಮೂಲಕ ಬಡವರಿಗೆ ಉದ್ಯೋಗ ಖಾತರಿ ಹಕ್ಕನ್ನು ನೀಡಿದ್ದರು. ಇದರಿಂದ ನಮ್ಮ ರಾಜ್ಯದ ಪಂಚಾಯಿತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದವು. ಈ ಕೆಲಸಗಳನ್ನು ಸ್ಥಳೀಯ ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ನರೇಗಾ ಉದ್ಯೋಗ ಕಾರ್ಡ್ ಹೊಂದಿರುವವರಿಗೆ ಉದ್ಯೋಗ ನೀಡಬೇಕಿತ್ತು, ಉದ್ಯೋಗ ಸಿಗದಿದ್ದರೆ ಕೂಲಿ ನೀಡಲಾಗುತ್ತಿತ್ತು. ಇದರಲ್ಲಿ ದುರ್ಬಳಕೆ ತಡೆಗಟ್ಟಲು ಹೆಬ್ಬೆರಳಚ್ಚು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಯೋಜನೆಯಿಂದ ರಾಜ್ಯದ ಪ್ರತಿ ಪಂಚಾಯಿತಿಗಳಿಗೆ ಪ್ರತಿ ವರ್ಷ ಕನಿಷ್ಠ 1-2 ಕೋಟಿ ರೂ. ಸರಾಸರಿ ಅನುದಾನ ಸಿಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಇದೆಲ್ಲದಕ್ಕೂ ಕುತ್ತು ಬಂದಿದೆ. ಈ ಹೊಸ ಕಾಯ್ದೆಯಲ್ಲಿ ಗ್ರಾಮಗಳಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಪಂಚಾಯಿತಿಗಳು ತೀರ್ಮಾನಿಸಲು ಆಗುವುದಿಲ್ಲ. ದೆಹಲಿಯಲ್ಲಿ ಕೂತಿರುವ ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ. ಈ ಕಾಯ್ದೆ ಜಾರಿ ಅಸಾಧ್ಯ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ಮನರೇಗಾ ಯೋಜನೆ ಮೂಲಕ ಒಂದೇ ವರ್ಷದಲ್ಲಿ 200 ಕೋಟಿ ರೂ.ಗೂ ಹೆಚ್ಚಿನ ಕೆಲಸವನ್ನು ಮಾಡಿದೆವು. 56 ಸಾವಿರ ಮನೆಗಳಿಗೆ ದನದ ಕೊಟ್ಟಿಗೆ ಕಟ್ಟಿಸಲಾಯಿತು, ಇಂಗು ಗುಂಡಿ ನಿರ್ಮಾಣಕ್ಕೆ ಅವಕಾಶ ನೀಡಿದೆವು. ಅರ್ಕಾವತಿ ನದಿಗೆ ಹತ್ತು ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದೇವೆ. ಹಾಸ್ಟೆಲ್, ಆಟದ ಮೈದಾನ, ಶಾಲಾ ಕೊಠಡಿ, ಪಂಚಾಯಿತಿ ಕಟ್ಟಡ, ಪಾರ್ಕ್, ರಸ್ತೆ, ಚರಂಡಿ ನಿರ್ಮಿಸಿದ್ದೇವೆ. ಈ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ, ಇದಕ್ಕಿಂತ ದೊಡ್ಡ ಯೋಜನೆ ಬೇರೆ ಇರುವುದಿಲ್ಲ ಎಂದು ವಿವರಿಸಿದರು.
“ಎಐಸಿಸಿಯವರು ಕಾರ್ಯಕಾರಿ ಸಮಿತಿ ಸಭೆ ಮಾಡಿ, ಈ ವಿಚಾರವಾಗಿ ಪಕ್ಷದ ವತಿಯಿಂದ ಯಾವ ರೀತಿ ಹೋರಾಟ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಬಂದು ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ತಾಲೂಕು ಮಟ್ಟಗಳಲ್ಲಿ ನೀವುಗಳು ಮಾಧ್ಯಮಗೋಷ್ಠಿ ಮಾಡಬೇಕು. ಪರಿಷತ್ ಸದಸ್ಯರು, ಸಂಸದರುಗಳನ್ನು ಶಾಸಕರಿಲ್ಲದ ಕ್ಷೇತ್ರಗಳಿಗೆ ವೀಕ್ಷಕರಾಗಿ ನೇಮಕ ಮಾಡಿದ್ದು, ಎಲ್ಲರೂ ಮಾಧ್ಯಮಗೋಷ್ಠಿ ಮಾಡ ಬೇಕು. ಎಐಸಿಸಿ ನಿರ್ದೇಶನ ನೀಡಿರುವ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಇದನ್ನು ಪಾಲಿಸದ ವೀಕ್ಷಕರು, ಪದಾಧಿಕಾರಿಗಳ ಬಗ್ಗೆ ವರದಿ ನೀಡಿ ಎಂದು ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದ್ದು, ಇದರಲ್ಲಿ ಆಸಕ್ತಿ ತೋರದವರನ್ನು ಕಿತ್ತುಹಾಕಲಾಗುವುದು ಎಂದರು.
ಕಾರಣಾಂತರಗಳಿಂದ ಕೋರ್ಟ್ ಆದೇಶಗಳಿಂದಾಗಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಆಗಿರಲಿಲ್ಲ. ಮುಂದಿನ ನಾಲ್ಕೈದು ತಿಂಗಳಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ಕೂಡ ಪಾಲಿಕೆ ಚುನಾವಣೆ ಬಗ್ಗೆ ಆದೇಶ ನೀಡಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀಸಲಾತಿ ವಿಚಾರ ಹಾಗೂ ಇತರೆ ತೊಡಕು ನಿವಾರಿಸಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ದ್ದೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.


