ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ವಾಸವಾಗಿರುವವರೆಲ್ಲರೂ ಇಲ್ಲಿನ ಮತದಾರರಲ್ಲ. ಚುನಾವಣಾ ಆಯೋಗವೀಗ ನೂರಕ್ಕೆ ನೂರರಷ್ಟು ದೋಷರಹಿತ ಮತ್ತು ಪಾರದರ್ಶಕ ಮತದಾರರಪಟ್ಟಿಯನ್ನು ಮೊದಲು ಸಿದ್ಧಪಡಿಸಬೇಕಿರುವ ತುರ್ತು ಅನಿವಾರ್ಯತೆ ಇದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಮುಂದಿನ ಜೂನ್ ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಪೀಠವು ಆದೇಶಿಸಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ನಾಮ ಸ್ವರೂಪ ಮತ್ತು ರೂಪುರೇಷೆಗಳು ಬದಲಾದ ಮೇಲೆ ಬೆಂಗಳೂರು ನಗರದಲ್ಲಿ ನಡೆಯಲಿರುವ ಮೊಟ್ಟ ಮೊದಲ ಚುನಾವಣೆ ಇದು. ಹೈದರಾಬಾದ್ ಮತ್ತು ಮುಂಬಯಿ ಕೂಡಾ ಗ್ರೇಟರ್ ಲೆಕ್ಕದಲ್ಲಿರುವಂತಹ ಕಾರ್ಪೊರೇಷನ್ಗಳು. ಆದರೆ ಐದು ಪ್ರತ್ಯೇಕ ಮಹಾನಗರಪಾಲಿಕೆಗಳನ್ನು ಒಳಗೊಂಡ ಮತ್ತು ವಿಸ್ಕೃತ ಜನಸಂಖ್ಯೆಯನ್ನು ಒಳಗೊಂಡ ಜಿಬಿಎ ಮತ್ತು ನಡೆಯಲಿರುವ ಚುನಾವಣೆ ಹಲವು ಹತ್ತು ದಿಕ್ಕಿನಲ್ಲಿ ವಿಶೇಷತೆ ಹೊಂದಿದೆ.
ದೇಶದ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಪ್ರಜೆಗಳು ಇಲ್ಲಿನ ಮತದಾರರ ಪಟ್ಟಿಯಲ್ಲಿ ನೋಂದಣಿಯನ್ನು ಪಡೆದಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದಲ್ಲಿ ತೊಡಗಿರುವ ವಿವಿಧ ರಾಜ್ಯಗಳ ಪ್ರಜೆಗಳಾರೂ ಗ್ರೇಟರ್ ಬೆಂಗಳೂರಿನ ಮತದಾರರಾಗಿ ನೋಂದಣಿಯಾಗಿಲ್ಲ. ಇದುವರೆಗೂ ನಡೆದಿರುವ ಲೋಕಸಭೆ ಚುನಾವಣೆಗಳಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತ್ತು ಅತಿ ಕಳಪೆಮಟ್ಟದ ಪ್ರಮಾಣದಲ್ಲಿ ಮತದಾನ ನಡೆಯುವ ಸಂಗತಿ ಇಲ್ಲಿ ಪ್ರಸ್ತುತ. ಆದ್ದರಿಂದ ಈ ದಿಶೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕಿರುವ ಸಂಗತಿ ಎಂದರೆ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಗೆ ಬರುವ ಎಲ್ಲ ವಾರ್ಡುಗಳಲ್ಲಿ ಪ್ರಸ್ತುತ ವಾಸವಾಗಿ ರುವ ಮತದಾರರು ಮತ್ತು ಅವರ ಭಾಗವಹಿಸುವಿಕೆ. ಪ್ರಪ್ರಥಮ ಜಿಬಿಎ ಚುನಾವಣೆಯಲ್ಲಿ ನೈಜ ಮತದಾರರ ಭಾಗವಹಿಸುವಿಕೆಯ ಪ್ರಮಾಣ ಅಧಿಕವಾಗಿದ್ದರೆ, ಇದಕ್ಕೆ ಹೆಚ್ಚಿನ ಮೌಲ್ಯ ಲಭಿಸುವುದು ಖಂಡಿತ.
ಇಡಿ ಪ್ರಪಂಚದಲ್ಲಿಯೇ ಅತಿವೇಗದಲ್ಲಿರುವ ಬೆಂಗಳೂರಿನ ಬೆಳವಣಿಗೆ, ನಾಗರಿಕ ಸ್ನೇಹಿ ವಾತಾವರಣ, ಮೂಲ ಗಾರ್ಡನ್ಸಿಟಿ ಸೊಗಡು ಸಿಲಿಕಾನ್ಸಿಟಿಯ ವರ್ಚಸ್ಸು ಹೆಚ್ಚಬೇಕಿದ್ದರೆ, ಇಲ್ಲಿರುವ ಪ್ರತಿಯೊಬ್ಬ ಅರ್ಹ ವ್ಯಕ್ತಿ ಮತದಾರನಾಗುವುದು ವಿಧಿತ. ಒಟ್ಟಿನಲ್ಲಿ ಚುನಾವಣೆ ಆಯೋಗವು ಈ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲದೆ ಮೊದಲು ದೋಷರಹಿತ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ. ಇನ್ನು ಸರ್ಕಾರದ ಮಟ್ಟದಲ್ಲಿ ವಾರ್ಡುವಾರು ಮೀಸಲು ಅಂತಿಮಗೊಳ್ಳಬೇಕಿದೆ. ಮೀಸಲು ನಿಗದಿ ವಿಚಾರದಲ್ಲಿ ಸಣ್ಣಪುಟ್ಟ ದೋಷಗಳೂ ಒಟ್ಟು ಚುನಾವಣೆಗೆ ಮಾರಕ ಎಂಬುದನ್ನು ಮರೆಯುವಂತಿಲ್ಲ. ವಾರ್ಡುವಾರು ಮೀಸಲು ನಿಗದಿಯಲ್ಲಿ ತಾರತಮ್ಯ ಕಂಡು ಬಂದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ದೋಷಪೂರಿತ ಮೀಸಲು ಪಟ್ಟಿ ಆಧರಿತ ಚುನಾವಣೆಗೆ ಸುತರಾಂ ಒಪ್ಪುವುದಿಲ್ಲ.
ಜಿಬಿಎ ಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ವರ್ಚಸ್ಸು ಮತ್ತು ಜನಮನ್ನಣೆಗೂ ಒಂದು ಸವಾಲು. ನಗರ ಪ್ರದೇಶದ ಜನ ನಾಡಿ ಮತ್ತು ಬೇಗುದಿಗೆ ಇದು ಪ್ರತಿಬಿಂಬ. ಕಳೆದ ಏಳು ವರ್ಷಗಳಿಂದ ಚುನಾವಣೆಯನ್ನು ಕಾಣದ ಬಿಬಿಎಂಪಿಯ ಪ್ರಸ್ತುತ ಆಡಳಿತವು ಒಂದರ್ಥದಲ್ಲಿ ಕೆಎ ಎಸ್ ಮತ್ತು ಐ ಎ ಎಸ್ ಅಧಿಕಾರಿಗಳು ಶಾಸಕರು ಮತ್ತು ಸಂಸದರ ಕೈಯಲ್ಲಿ ಹಸ್ತಗತವಾಗಿದೆ. ಅಧಿಕಾರ ವಿಕೇಂದ್ರೀಕರಣದ ಸೂತ್ರಗಳಿಗೆ ಇದು ತದ್ವಿರುದ್ಧ. ಒಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆ ಹಲವು ಹತ್ತು ಮುಖಗಳನ್ನು ಒಳಗೊಂಡಿದೆ.


