ನವದೆಹಲಿ: ಪ್ರತಿ ನಾಯಿ ಕಡಿತದಿಂದ ಗಾಯಗೊಂಡಲ್ಲಿ ಅಥವಾ ಮೃತಪಟ್ಟಲ್ಲಿ ಆಯಾ ರಾಜ್ಯ ಸರ್ಕಾರಗಳು ದುಬಾರಿ ಪರಿಹಾರವನ್ನು ತೆರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೀದಿ ನಾಯಿಗಳ ಕುರಿತು ಪ್ರಕರಣದ ವಿಚಾರಣೆಯು ಮಂಗಳವಾರ ನ್ಯಾ. ವಿಕ್ರಂನಾಥ್, ನ್ಯಾ. ಸಂದೀಪ್ ಮೆಹ್ತಾ ಮತ್ತು ನ್ಯಾ. ಎನ್ವಿ ಅಂಜಾರಿಯಾ ಅವರ ಒಳಗೊಂಡ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠದ ಮುಂದೆ ಬಂದಿದ್ದು, ಬೀದಿ ನಾಯಿಗಳ ಹಾವಳಿಯನ್ನು ಪರಿಹರಿಸಲು ರಾಜ್ಯಗಳು 75 ವರ್ಷಗಳಿಂದ ಏನೂ ಮಾಡಿಲ್ಲ ಎಂದು ಗಮನಿಸಿತು. ಅಲ್ಲದೇ, ಬೀದಿ ನಾಯಿಗಳ ಕುರಿತು ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಯಾವುದೇ ನಾಯಿ ಕಡಿತ ಮತ್ತು ನಾಯಿ ಕಡಿತದ ಸಾವು, ಅಥವಾ ಮಗು, ವಯಸ್ಕರು ಗಾಯಗೊಳ್ಳುವ ಪ್ರಕರಣಗಳಿಗೆ ರಾಜ್ಯ ಸರ್ಕಾರಗಳಿಗೆ ದುಬಾರಿ ಬೆಲೆಯ ಪರಿಹಾರವನ್ನು ನಿಗದಿಸಲಾಗುವುದು ಎಂದು ನ್ಯಾ. ನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರಾಣಿಗಳ ಕಲ್ಯಾಣ ಸಂಘಟನೆ ಪರ ಹಿರಿಯ ವಕೀಲರಾದ ಮನೇಕಾ ಗುರುಸ್ವಾಮಿ, ಆ ರೀತಿ ಖಂಡಿತ ಮಾಡಬೇಕು ಎಂದು ಕೋರಿದರು.ನಾಯಿಗಳಿಗೆ ಆಹಾರ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಎಲ್ಲರ ಮೇಲೂ ಇದರ ಹೊಣೆಗಾರಿಕೆ ಇದೆ.
ಬೀದಿನಾಯಿಗಳನ್ನು ರಕ್ಷಿಸಿ ನಿಮ್ಮ ಮನೆಗೆ ಕರೆದುಕೊಂಡು ಹೋಗಿ, ನಿಮ್ಮ ಆವರಣದಲ್ಲಿ, ಮನೆಯಲ್ಲಿ. ಯಾಕೆ ಎಲ್ಲೆಡೆ ಹರಡುವ ಮೂಲಕ ಜನರನ್ನು ಹೆದರಿಸಿ, ಕಚ್ಚಲು, ಬೆನ್ನಟ್ಟಲು, ಸಾವಿಗೆ ಕಾರಣವಾಗುವುದೇಕೆ ಎಂದ ನ್ಯಾ. ನಾಥ್, ನಾಯಿಗಳ ಕಡಿತವು ಜೀವನಪರ್ಯಂತ ಮಾಸದ ಗಾಯವಾಗಿ ಉಳಿಯುತ್ತದೆ ಎಂದರು.
ಇದಕ್ಕೆ ಪ್ರತಿಯಾಗಿ ವಾದಿಸಿದ ವಕೀಲರಾದ ಗುರುಸ್ವಾಮಿ, ಕೇಂದ್ರದಿಂದ ನಿಧಿಯ ಬಳಕೆಯು ಕಡಿಮೆಯಾಗಿದ್ದು, ಎಬಿಸಿ ನಿಯಮಗಳು ಕೇವಲ ಜನನ ನಿಯಂತ್ರಣದ ಬಗ್ಗೆ ಮಾತ್ರವಲ್ಲ, ಪ್ರಾಣಿಗಳ ಬಂಧನವನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಾಯಿ ಕಡಿತಕ್ಕೆ ಒಳಗಾಗಿ ಸಾವನ್ನಪ್ಪಿದ 9 ವರ್ಷದ ಮಗುವಿನ ಸಾವಿಗೆ ಯಾರು ಹೊಣೆ? ನಾಯಿಗಳ ಪ್ರೇಮಿಗಳು ಅಥವಾ ಸಂಘಟನೆಯಾ ಎಂದು ಪ್ರಶ್ನಿಸಿದ ಪೀಠ, ಈ ರೀತಿಯ ಘಟನೆಗಳಿಗೆ ನ್ಯಾಯಾಲಯ ಕಣ್ಮುಚ್ಚಿ ಕುಳಿತುಕೊಳ್ಳಬೇಕಾ? ಇಂತಹ ಘಟನೆ ಮರುಕಳಿಸಬೇಕಾ ಎಂದು ಪ್ರಶ್ನಿಸಿತು.
ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಗಂಭೀರ ಪ್ರಶ್ನೆಯಾಗಿದ್ದು, ಅವರಿಂದ ನಾವು ಉತ್ತರ ನಿರೀಕ್ಷಿಸುತ್ತೇವೆ ಎಂದ ಪೀಠ, ಪ್ರಾಣಿಗಳಿಂದ ಜನರಿಗೆ ಉಂಟಾಗುವ ನೋವಿಗೆ ಯಾರು ಹೊಣೆ ಮತ್ತು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿದರೆ ಯಾರು ಹೊಣೆಗಾರರಾಗುತ್ತಾರೆ ಎಂದು ಪ್ರಶ್ನಿಸಿತು


