ಅನಿಯಮಿತವಾಗಿ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿರುವ ಬಿಎಂಆರ್ ಸಿಎಲ್ ಜನವರಿ 15ರಿಂದ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.
ಬಿಎಂಆರ್ ಸಿಎಲ್ ಸಂಸ್ಥೆ ಶನಿವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ದಿನ, 3 ದಿನದ ಹಾಗೂ 5 ದಿನದ ಪಾಸ್ ವ್ಯವಸ್ಥೆ ಜನವರಿ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಈ ಪಾಸ್ ಹೊಂದಿದವರು ಎಷ್ಟು ಸಲ ಬೇಕಾದರೂ ಮೆಟ್ರೋ ರೈಲಿನಲ್ಲಿ ಸಂಚರಿಸಬಹುದಾಗಿದೆ.
ಕ್ಯೂ ಅಂಡ್ ಕೋರ್ ಮೂಲಕ ಮೊಬೈಲ್ ನಲ್ಲಿಯೇ ಪಾಸ್ ಪಡೆಯಬಹುದಾಗಿದೆ. ಮೊಬೈಲ್ ನಲ್ಲಿ ಬರುವ ಡಿಜಿಟಲ್ ಪಾಸ್ ತೋರಿಸಿ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ಸಂಚರಿಸಬಹುದಾಗಿದೆ.
1 ದಿನದ ಪಾಸ್ ಗೆ 250 ರೂ., 3 ದಿನದ ಪಾಸ್ ಗೆ 550 ರೂ. ಹಾಗೂ 5 ದಿನದ ಪಾಸ್ ಗೆ 850 ರೂ. ನಿಗದಿಪಡಿಸಲಾಗಿದೆ. ಪಾಸ್ ಪಡೆಯಲು ಠೇವಣಿ ಇಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.



