ನಟ ಯಶ್ ಬರ್ತ್ ಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ವೇಣು ಕ್ರಿಯೇಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜ.8ರಂದು ನಟ ಯಶ್ ಹುಟ್ಟುಹಬ್ಬದ ಹಿನ್ನೆಲೆ ಗಾಲ್ಫ್ ಕ್ಲಬ್ ಬಳಿ ಅವರ ಮನೆಯ ಎದುರು ಬ್ಯಾನರ್ ಹಾಕಲಾಗಿತ್ತು. ಹುಟ್ಟುಹಬ್ಬ ಶುಭಕೋರಿ ಸಾಕಷ್ಟು ಫ್ಲೆಕ್ಸ್‌ಗಳನ್ನು ಹಾಕಿಸಲಾಗಿತ್ತು.
ಈ ಸಂಬಂಧ ಜಿಬಿಎ ಅಧಿಕಾರಿಗಳು ದೂರು ದಾಖಲಿಸಿ, ದೂರಿನಲ್ಲಿ ವೇಣು ಕ್ರಿಯೇಶನ್ ಅನ್ನು ಆರೋಪಿಯಾಗಿ ಉಲ್ಲೇಖಿಸಿದ್ದರು. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದೆ. ಈ ಮಧ್ಯೆ, ಸಿನಿಮಾದ ವಿರುದ್ಧ ದೂರುಗಳು ದಾಖಲಾಗಲು ಆರಂಭವಾಗಿವೆ. ಸಿನಿಮಾ ವಿರುದ್ಧ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
ಇಂದು ಚಿತ್ರದ ವಿರುದ್ಧ ಸಿಬಿಎಫ್ಸಿ (ಸೆನ್ಸಾರ್ ಮಂಡಳಿ)ಗೆ ದೂರು ದಾಖಲಾಗಿದೆ. ಟೀಸರ್‌ನಲ್ಲಿ ಅಶ್ಲೀಲ ಹಾಗೂ ನೈತಿಕತೆಗೆ ವ್ಯತಿರಿಕ್ತವಾದ ದೃಶ್ಯಗಳಿವೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಹಳ್ಳಿ, (ಸಿಬಿಎಫ್ಸಿ) ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದಾರೆ. ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿದ್ದಾರೆ. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಸಿನಿಮಾದ ವಿರುದ್ಧ ಕರ್ನಾಟಕ ಎಎಪಿಯ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಟೀಸರ್‌ನಲ್ಲಿ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯರ ಘನತೆಯನ್ನು ಕುಗ್ಗಿಸುತ್ತವೆ ಮತ್ತು ಕನ್ನಡ ಸಂಸ್ಕೃತಿಯನ್ನು ಅವಮಾನಿಸುತ್ತವೆ ಎಂದು ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ದೂರಿನಲ್ಲಿ ತಿಳಿಸಿದ್ದಾರೆ.


