Menu

ಸುಪ್ರೀಂ ಆದೇಶದಂತೆ ಕಾಲಮಿತಿಯೊಳಗೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿಕೆ ಶಿವಕುಮಾರ್

“ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಅರಮನೆ ಮೈದಾನ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಪಾಲಿಕೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಗಡುವು ನೀಡಿರುವ ಬಗ್ಗೆ ಕೇಳಿದಾಗ, “ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದ್ದು, ಅದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಎಲ್ಲಾ ರೀತಿಯ ಆದೇಶ ನೀಡಲಿದೆ. ನಮಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನುಸಾರ ಏನೆಲ್ಲಾ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ ಎಂದು ತಿಳಿಸಿದರು.

ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಳಿದಾಗ, “ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕೆ ಸಮಿತಿ ರಚಿಸಲಾಗಿದ್ದು, ಅದು ತೀರ್ಮಾನ ಮಾಡಲಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲಿದ್ದು, ಅವರಿಗೆ ಏನು ನಿರ್ದೇಶನ ನೀಡಬೇಕೋ ನೀಡುತ್ತೇವೆ. ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿವೆ. ಇದನ್ನು ನಾನು ಗಮನಿಸಿಲ್ಲ. ಇದನ್ನು ಪರಿಶೀಲಿಸಿ ತಪ್ಪಾಗಿದ್ದರೆ ಸರಿಪಡಿಸಲು ಅವರಿಗೆ ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಚುನಾವಣೆ ನಡೆಸಲು ನ್ಯಾಯಾಲಯದ ಬಳಿ ಕಾಲಾವಕಾಶ ಕೇಳುತ್ತೀರಾ ಎಂದು ಕೇಳಿದಾಗ, “ಇಲ್ಲ, ನಾವು ಯಾವುದೇ ಕಾಲಾವಕಾಶ ಕೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಚುನಾವಣೆ ನಿಮ್ಮ ಪಾಲಿಗೆ ಎಷ್ಟು ಸವಾಲಿನದ್ದಾಗಿದೆ ಎಂದು ಕೇಳಿದಾಗ, “ಏನು ಸವಾಲಿದೆ, ಚುನಾವಣೆ ನಡೆಸುವುದು ನನ್ನ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಟ್ಟು  ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ” ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಫ್ರೆಂಡ್ಲಿ ಫೈಟ್ ವಿಚಾರವಾಗಿ ಕೇಳಿದಾಗ, “ಅವರು ಏನಾದರೂ ಮಾಡಿಕೊಳ್ಳಲಿ. ಜತೆಯಾಗಿಯಾದರೂ ಚುನಾವಣೆ ಮಾಡಲಿ, ಬೇರೆಯಾಗಿ ಬೇಕಾದರೂ ಮಾಡಲಿ. ಅವರು ಸಂಸತ್ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಮಾಡಿದಂತೆ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆಯನ್ನು ಮಾಡಿದರೆ ನೇರ ಹಣಾಹಣಿ ಇರುತ್ತದೆ” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *