ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಆರೋಗ್ಯದಲ್ಲಿ ತೊಂದರೆಯಾಗಿದ್ದು, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 10 ರಂದು ಶೌಚಾಲಯಕ್ಕೆ ಹೋದಾಗ ಅವರು ಎರಡು ಬಾರಿ ಪ್ರಜ್ಞಾಹೀನರಾಗಿದ್ದರು ಎಂದು ತಿಳಿದು ಬಂದಿದೆ.
74 ವರ್ಷದ ಧನಕರ್ ಅವರನ್ನು ‘ಎಂಆರ್‌ಐ’ ಸ್ಕ್ಯಾನ್ ಗೆ ಒಳಪಡಿಸಲಾಗುವುದು, ಮಂಗಳವಾರ ಇತರ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಧನಕರ್ ಅವರು ಈ ಹಿಂದೆ ಕಛ್, ಉತ್ತರಾಖಂಡ, ಕೇರಳ, ದೆಹಲಿ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದೇ ರೀತಿ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಕಳೆದ ವರ್ಷ ಜುಲೈ 21ರಂದು ಜಗದೀಪ್ ಧನಕರ್ ಆರೋಗ್ಯ ಕಾರಣ ನೀಡಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರ ಸರ್ಕಾರವು ಜಗದೀಪ್ ಧನಕರ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದೆ. ಮೌನ ವಹಿಸಿ ರಾಜೀನಾಮೆ ನೀಡಿರುವ ಮೊದಲ ಉದಾಹರಣೆ ಜಗದೀಪ್ ಧನಕರ್ ಅವರದ್ದು. ಯಾವ ಕಾರಣಕ್ಕಾಗಿ ಅವರು ರಾಜೀನಾಮೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು ಅದು ಮೊದಲು ಬಹಿರಂಗಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಇದ್ದಕ್ಕಿದ್ದಂತೆಯೇ ಜಗದೀಪ್ ಧನಕರ್ ರಾಜೀನಾಮೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಬಿಜೆಪಿ ಮತ್ತು ಧನಕರ್ ನಡುವಿನ ಹಳಸಿದ ಸಂಬಂಧದ ಭಾಗ ಎಂದು ವಿಪಕ್ಷಗಳು ವಿಶ್ಲೇಷಣೆ ಮಾಡಿದ್ದವು. ಆದರೆ ಅವರು ಆರೋಗ್ಯದ ಕಾರಣ ರಾಜೀನಾಮೆ ನೀಡಿದ್ದು ಎಂದು ಹೇಳಿಕೊಂಡಿದ್ದರು.


