ಇರಾನ್‌ನೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದು, ಈ ಕ್ರಮವು ತಕ್ಷಣವೇ ಜಾರಿಗೆ ಬರಲಿದೆ ಮತ್ತು ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇರಾನ್ ಮೇಲೆ ಆರ್ಥಿಕ ಒತ್ತಡ ಹೇರಲು ಮಾತ್ರವಲ್ಲದೆ ಇರಾನ್‌ನೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳುವ ದೇಶಗಳಿಗೆ ಎಚ್ಚರಿಕೆ ನೀಡಲು ಈ ಕ್ರಮಕ್ಕೆ ಟ್ರಂಪ್ ಮುಂದಾಗಿರುವುದರಿಂದ ಭಾರತ ಸೇರಿ ಹಲವು ದೇಶಗಳ ಮೇಲೆ ಪರಿಣಾಮ ಬೀರಲಿದೆ. ಭಾರತ ಹಾಗೂ ಇರಾನ್ ದೀರ್ಘಕಾಲದ ವ್ಯಾಪಾರ ಸಂಬಂಧ ಹೊಂದಿವೆ. ಭಾರತವು ಇರಾನ್ನಿಂದ ಡ್ರೈಫ್ರೂಟ್ಸ್, ರಾಸಾಯನಿಕಗಳು ಮತ್ತು ಗಾಜಿನ ಸಾಮಾನಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತವು ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಯಂತ್ರೋಪಕರಣಗಳು ಮತ್ತು ಇತರ ಅನೇಕ ವಸ್ತುಗಳನ್ನು ಇರಾನ್ಗೆ ರಫ್ತು ಮಾಡುತ್ತದೆ.
ಭಾರತವು ಈಗಾಗಲೇ ಅಮೆರಿಕದಿಂದ ಶೇ.50 ಸುಂಕ ಎದುರಿಸುತ್ತಿದೆ. ಈ ಸುಂಕದ ಶೇ.25ರಷ್ಟು ರಷ್ಯಾದಿಂದ ತೈಲ ಖರೀದಿಸುವುದರಿಂದ ಉಂಟಾಗುತ್ತದೆ. ರಷ್ಯಾದಿಂದ ತೈಲ ಖರೀದಿಸುವುದರಿಂದ ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಸಹಾಯವಾಗುತ್ತದೆ ಎಂಬುದು ಅಮೆರಿಕದ ವಾದ.
ಹಣದುಬ್ಬರ, ಆರ್ಥಿಕ ಸಂಕಷ್ಟ ಮತ್ತು ಆಡಳಿತದ ಬಗ್ಗೆ ರೋಸಿ ನಾಗರಿಕರು ಇರಾನ್ನ ಅನೇಕ ಸ್ಥಳಗಳಲ್ಲಿ ಪ್ರತಿಭಟನೆ ನೆಸುತ್ತಿದ್ದಾರೆ. ಈ ಪ್ರತಿಭಟನೆ ಹಂಸಾರೂಪ ತಾಳಿ ಈವರೆಗೆ 544 ಮಂದಿ ಮೃತಪಟ್ಟಿದ್ದಾರೆ. 10 ಸಾವಿರಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.
ಈ ನಡುವೆ ಇರಾನ್ ಮಾತುಕತೆಗಾಗಿ ಅಮೆರಿಕವನ್ನು ಸಂಪರ್ಕಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇರಾನ್ ಪರಿಸ್ಥಿತಿ ಹದಗೆಟ್ಟರೆ ಮಾತುಕತೆಗಳು ಪ್ರಾರಂಭವಾಗುವ ಮೊದಲು ಅಮೆರಿಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಟ್ರಂಪ್ ಎಚ್ಚರಿಸಿದ್ದರು.


