ಪತ್ನಿ ಮತ್ತು ಮಗುವಿದ್ದರೂ ಬೆಂಗಳೂರಿನ ಟೆಕ್ಕಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಂದಿಗೆ ಪಿಜಿಯಲ್ಲಿ ಪಲ್ಲಂಗದಲ್ಲಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪತ್ನಿಗೆ ಜಾತಿ ನಿಂದನೆ, ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೆಕ್ಕಿ ಜೆಡ್ರೆಲಾ ಜಾಕೂಬ್ ಆರೂಪ್ನನ್ನು ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎರಡು ವರ್ಷಗಳಿಂದ ಜಾಕೂಬ್ ತನ್ನ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದರೆ ಜಾಕೂಬ್‌ಗೆ ಉದ್ಯೋಗ ಇಲ್ಲದ ಹಿನ್ನೆಲೆ ಪತ್ನಿ ತನ್ನ ಕೆಲಸ ಬಿಟ್ಟುಕೊಟ್ಟು, ಪತಿಗೆ ಉದ್ಯೋಗ ಸಿಗುವಂತೆ ಸಹಾಯ ಮಾಡಿದ್ದರು ಎನ್ನಲಾಗಿದೆ.
ಮಗು ಜನಿಸಿದ ಬಳಿಕ ಪತ್ನಿಯ ಮೇಲೆ ಜಾಕೂಬ್ ಜಾತಿ ನಿಂದನೆ ನಡೆಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಗರ್ಭಪಾತವಾಗುವಂತೆ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ವಾಗಿದೆ. ಮಗುವಾದ ಮೇಲೆ ಪತ್ನಿಗೆ ತಿಳಿಯದಂತೆ ಜಾಕೊಬ್ ಮತ್ತೊಬ್ಬ ಯುವತಿಯ ಸಹವಾಸ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದ. ಪತಿ ವಿರುದ್ಧ ಪತ್ನಿ ಅಟ್ರಾಸಿಟಿ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿದ್ದರು.
ಕರ್ನಾಟಕದಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆ ಜಾರಿಗೆ ಬಂದ ಮೇಲೆ ಅಟ್ರಾಸಿಟಿ ಕೇಸ್‌ನಲ್ಲಿ ಬಂಧನಕ್ಕೆ ಒಳಗಾದ ಮೊದಲ ಕೇಸ್ ಇದಾಗಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಜಾತಿ ನಿಂದನೆ, ದೌರ್ಜನ್ಯ ಮತ್ತು ತಾರತಮ್ಯದ ಪ್ರಕರಣಗಳನ್ನು ತನಿಖೆ ನಡೆಸುತ್ತದೆ. ಪ
ಪತ್ನಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದಕ್ಕೆ ದಾಳಿ ನಡೆಸಿದಾಗ, ಪ್ರೇಯಸಿಯೊಂದಿಗೆ ಪಲ್ಲಂಗದ ಮೇಲೆಯೇ ಇದ್ದ ಜಾಕೂಬ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗಿದೆ.


