Menu

ಭಾರತಕ್ಕೆ ಸಂಬಂಧಿಸಿದಂತೆ ಅಮೆರಿಕದ ಕಟುನೀತಿ ಬದಲಾಗಲಿ

ಜಾಗತಿಕ ಮಟ್ಟದಲ್ಲಿ ಭಾರತವೊಂದು ಬೃಹತ್ ಮಾರುಕಟ್ಟೆ ಎಂಬ ಕಟುಸತ್ಯವನ್ನು ಅಮೆರಿಕ ಒಪ್ಪುವುದಾದರೆ, ಡೊನಾಲ್ಡ್ ಟ್ರಂಪ್ ತಾಳಿರುವ ವ್ಯಾಪಾರಿಕ ಕಟು ತೀರ್ಮಾನಗಳನ್ನು ವಾಪಸ್ ಪಡೆಯುವುದು ಅನಿವಾರ್ಯವಾದೀತು.

ಭಾರತದೊಂದಿಗೆ ಅಮೆರಿಕದ ವ್ಯಾಪಾರ ಹಾಗೂ ವಾಣಿಜ್ಯ ಸಂಬಂಧ ಕುರಿತು ಈ ದೇಶದ ರಾಯಭಾರಿ ಸರ್ಗಿಯೋ ಗೋರ್ ನೀಡಿರುವ ಹೇಳಿಕೆ ಗಮನಾರ್ಹ. ಭಾರತದ ಜೊತೆ ಅಮೆರಿಕಕ್ಕೆ ಯಾವಾಗಲೂ ಉತ್ತಮ ಸಂಬಂಧ ಮತ್ತು ಸಹಕಾರ ಇರಬೇಕಾಗುತ್ತೆ . ಈ ದಿಶೆಯಲ್ಲಿ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಣ ಸಂಬಂಧಗಳು ವೃದ್ಧಿಯಾಗಲಿವೆ ಎಂದು ರಾಯಭಾರಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಣ ಭಿನ್ನಮತವಿರುವುದನ್ನು ಅಮೆರಿಕ ರಾಯಭಾರಿ ತಳ್ಳಿಹಾಕಿಲ್ಲ. ಇವರ ಮಾತುಗಳಿಂದ ವ್ಯಕ್ತವಾಗುವ  ಪ್ರಮುಖ ಸಂಗತಿ ಎಂದರೆ ಈ ಉಭಯ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟ . ವ್ಯಾಪಾರಿಕ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಇಬ್ಬರು ನಾಯಕರು ಪರಸ್ಪರ ಮಾತುಕತೆ ನಡೆಸುವ ಬಗ್ಗೆ ಸರಿಯಾದ ಮತ್ತು ಸ್ಪಷ್ಟವಾದ ನಿಲುವು ರೂಪುಗೊಂಡಿಲ್ಲ. ಮೂರು ದಿನಗಳ ಹಿಂದೆ ಟ್ರಂಪ್ ಆಡಳಿತದ ಪ್ರಮುಖ ಕಾರ್ಯದರ್ಶಿ ಲುಟ್ನಿಕ್ ನೀಡಿದ ಹೇಳಿಕೆಯನ್ನು ಗಮನಿಸಿದಾಗ ಮೋದಿ ಜೊತೆ ಟ್ರಂಪ್ ಯಾಕೆ ಮಾತುಕತೆಗೆ ಸಿದ್ಧವಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಲುಟ್ನಿಕ್ ಮಾತಿನ ಮರ್ಮವಿಷ್ಟೆ . ತೈಲ ಖರೀದಿ ವಿಚಾರದಲ್ಲಿ ರಷ್ಯಾ ಜೊತೆ ಭಾರತವು ಹೊಂದಿರುವ ವಾಣಿಜ್ಯ ಒಪ್ಪಂದವನ್ನು ವಾಪಸ್ ಪಡೆಯುವವರೆಗೆ ಭಾರತಕ್ಕೆ ಸುಂಕದ ಭಾರದಿಂದ ಮುಕ್ತಿ ಇಲ್ಲ ಎಂಬುದು. ಆದರೆ ರಷ್ಯಾದೊಂದಿಗೆ ಭಾರತವು ಮೊದಲಿನಿಂದಲೂ ಹೊಂದಿರುವ ತೈಲ ಖರೀದಿ ಒಪ್ಪಂದಗಳನ್ನು ಒಮ್ಮೆಲೆ ರದ್ದುಗೊಳಿಸಲು ಸಾಧ್ಯವೇ ಎಂಬುದು ಗಂಭೀರ ಪ್ರಶ್ನೆ. ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಟ್ರಂಪ್, ಭಾರತದ ಮೇಲೆ ಅತ್ಯಧಿಕ ಸುಂಕ ಭಾರವನ್ನು ಹೊರಿಸುತ್ತಿ ದ್ದರೂ ಇದನ್ನು ಈ ದೇಶ ಬಹಳ ತಾಳ್ಮೆಯಿಂದಲೇ ಸಹಿಸಿಕೊಂಡಿದೆ. ಭಾರತದ ಈ ಧೋರಣೆ ಮತ್ತು ನಿಲುವು ಕೂಡಾ ದೊಡ್ಡಣ್ಣನಿಗೆ ಗಲಿಬಲಿ ಮೂಡಿಸಿದ್ದರೂ ಅಚ್ಚರಿಯಿಲ್ಲ. ಏಕೆಂದರೆ ಭಾರತದ ತೈಲ ಮಾರುಕಟ್ಟೆಯಲ್ಲಿ ಪ್ರಸಕ್ತ ತಲೆದೋರಿರುವ ಏರು ಪೇರು ಮತ್ತು ವ್ಯತ್ಯಾಸಗಳಿಗೆ ಅಮೆರಿಕವು ಭಾರತದ ಮೇಲೆ ಹೇರಿರುವ ಸುಂಕಭಾರದ ಪರಿಣಾಮವಲ್ಲ. ಸುಂಕ ಭಾರದ ತೀರ್ಮಾನಕ್ಕೂ ಭಾರತೀಯ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರುಗಳಿಗೂ ಸಂಬಂಧವಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರರು ಸ್ಪಷ್ಟಪಡಿಸಿರುವುದೀಗ ಎಲ್ಲರ ಗಮನಸೆಳೆದಿದೆ.

ಒಟ್ಟಿನಲ್ಲಿ ಭಾರತದಂತಹ ಜಾಗತಿಕ ಮಟ್ಟದ ಅತಿ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಅಮೆರಿಕ ದೇಶಕ್ಕೆ ಇಷ್ಟವಿಲ್ಲ. ಆದರೆ ಈ ಕಟುಸತ್ಯವನ್ನು ಮುಕ್ತವಾಗಿ ಒಪ್ಪಿಕೊಳ್ಳಲು ಡೊನಾಲ್ಡ್ ಟ್ರಂಪ್‌ಗೆ ಹೃದಯವಿಲ್ಲ! ರಷ್ಯಾ ಜೊತೆ ಉತ್ತಮ ಸಂಬಂಧವನ್ನು ಹೊಂದಿರುವ ಭಾರತಕ್ಕೆ ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಜೊತೆಯೂ ಜಾಗತಿಕ ಮಟ್ಟದಲ್ಲಿ ಸೌಹಾರ್ದಯುತ ಸಂಬಂಧಗಳನ್ನು ಹೊಂದಿರಬೇಕೆಂಬ ಬಯಕೆ ಮತ್ತು ಆಶಯ. ಇದು ಭಾರತದ ಇಂದಿನ ವಿದೇಶಾಂಗ ನೀತಿಯಲ್ಲ. ಇದಕ್ಕೆ ಪರಂಪರೆ ಮತ್ತು ಸುದೀರ್ಘ ಇತಿಹಾಸವಿದೆ. ಅದೇನೆ ಇರಲಿ. ಜಾಗತಿಕ ಮಟ್ಟದಲ್ಲಿ ಭಾರತವೊಂದು ಬೃಹತ್ ಮಾರುಕಟ್ಟೆ ಎಂಬ ಕಟುಸತ್ಯವನ್ನು ಅಮೆರಿಕ ಒಪ್ಪುವುದಾದರೆ, ಟ್ರಂಪ್ ತಾಳಿರುವ ವ್ಯಾಪಾರಿಕ ಕಟು ತೀರ್ಮಾನಗಳನ್ನು ವಾಪಸ್ ಪಡೆಯುವುದು ಅನಿವಾರ್ಯ.

Related Posts

Leave a Reply

Your email address will not be published. Required fields are marked *