ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಗೊಂದಲಗಳು ಮುಂದುವರೆದ ನಡುವೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಿಢೀರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಭಾರಿ ಬದಲಾವಣೆ ಬದಲಾವಣೆಯ ಮುನ್ಸೂಚನೆ ನೀಡಿದೆ.
ಹೈಕಮಾಂಡ್ ಅಣತಿಯಂತೆ ನಡೆದುಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರ ಸಮುಖದಲ್ಲಿ ಒಪ್ಪಂದವಾದಂತೆ ತಮಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಬೇಕು. ಇಲ್ಲದೆ ಹೋದರೆ ಶಾಸಕರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ.ಸರ್ಕಾರ ಮತ್ತು ಪಕ್ಷ ಸಂಘಟನೆಯ ಮೇಲೂ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ಡಿ.ಕೆ. ಶಿವಕುಮಾರ್ ನೀಡಿದ್ದಾರೆ ಎನ್ನಲಾಗುತ್ತದೆ.
ಈಗಾಗಲೇ ಕೆಲವು ರಾಜಕೀಯ ಪರಿಸ್ಥಿತಿಗಳಿಂದಾಗಿ ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್ ಹೈಕಮಾಂಡ್, ಡಿ.ಕೆ.ಶಿವಕುಮಾರ್ ಬಿಗಿ ಪಟ್ಟು ಹಿಡಿದು ಬೇರೆ ರೀತಿಯ ರಾಜಕಾರಣ ಮಾಡಿದರೆ ಅದು ಮತ್ತೊಂದು ರೀತಿಯ ತೊಂದರೆಯುಂಟು ಮಾಡುವ ಆತಂಕ ನಿರ್ಮಾಣವಾಗಿದೆ. ಭಾನುವಾರ ಒಕ್ಕಲಿಗ ಉದ್ಯಮಿ ಎಕ್್ಸಪೋದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೇಲೆ ತಮಗೆ ವಿಶ್ವಾಸವಿದ್ದು, ಅವಕಾಶ ದೊರೆಯಲಿದೆ ಎಂದು ಹೇಳಿದರು.
ಕಷ್ಟಪಟ್ಟು ಹೊಡೆದು, ಬಡಿದು, ಪೆಟ್ಟು ತಿಂದು ಇಲ್ಲಿಯವರೆಗೂ ಬಂದಿದ್ದೇನೆ. ನನ್ನನ್ನು ಬಂಡೆ ಎಂದು ಸುಮ್ಮನೆ ಕರೆಯುವುದಿಲ್ಲ. ಬಂಡೆ ಕೆತ್ತಿದಾಗ ಮೂರ್ತಿಯಾಗುತ್ತದೆ. ಚಿನ್ನ ಕಾಯಿಸಿದಾಗ ಹೊಳೆಯುತ್ತದೆ. ಮುಂದಿನ ದಿನಗಳಲ್ಲಿ ಪಕ್ಷ ನನಗೆ ಸೂಕ್ತ ಅವಕಾಶ ನೀಡಲಿದೆ ಎಂಬ ಅರ್ಥದ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದರು. ಸಮುದಾಯದ ಜನ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದ್ದರು.
ಕೆಲ ದಿನಗಳ ಕಾಲ ರಾಜ್ಯ ರಾಜಕಾರಣದಿಂದ ದೂರವಿದ್ದಂತಹ ರಣದೀಪ್ ಸಿಂಗ್ ಸುರ್ಜೇವಾಲ ಆರು ತಿಂಗಳ ಬಳಿಕ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಅವರ ಬಣ ಪರಸ್ಪರ ಶಕ್ತಿ ಪ್ರದರ್ಶನ ಮಾಡುವ ತಯಾರಿ ನಡೆಸಿಕೊಂಡಿವೆ.
ತಾವು ಪಕ್ಷದ ಅಧ್ಯಕ್ಷರಾಗಿರುವುದರಿಂದ ಶಿಸ್ತು ಉಲ್ಲಂಘನೆಯಾಗಬಾರದು ಎಂಬ ಕಾರಣಕ್ಕಾಗಿ ಡಿ.ಕೆ.ಶಿವಕುಮಾರ್ ಪ್ರತಿ ಹಂತದಲ್ಲೂ ತಮ ಬೆಂಬಲಿಗರನ್ನು ಹತೋಟಿಯಲ್ಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹೈಕಮಾಂಡ್ ನಾಯಕರು ರಾಜ್ಯದ ಬೆಳವಣಿಗೆಗಳ ಬಗ್ಗೆ ಅನಾದರಣೆಯಿಂದ ನಡೆದುಕೊಳ್ಳುತ್ತಿರುವುದು ಕಂಡುಬಂದಿದೆ. ನಾಯಕತ್ವದ ಗೊಂದಲದಲ್ಲಿ ಹೈಕಮಾಂಡ್ ತಲೆ ಹಾಕುವುದಿಲ್ಲ ಎಂದು ಸಂದೇಶ ನೀಡಿದ ಬೆನ್ನಲ್ಲೆ ಸಿದ್ದರಾಮಯ್ಯ ಅವರ ಬಣ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಹೈಕಮಾಂಡ್ ಮಧ್ಯ ಪ್ರವೇಶಿಸದೇ ಇದ್ದರೆ ನಾಯಕತ್ವ ಬದಲಾವಣೆಯೊಂದಿಗೆ ಮರೀಚಿಕ್ಕೆಯಾಗಬಹುದು. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಬಾಧಿತವಾಗಿ ಆಡಳಿತ ನಡೆಸಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ನಿರೀಕ್ಷೆಯಂತೆ ರಣದೀಪ್ ಸಿಂಗ್ ಸುರ್ಜೇವಾಲ ಅಖಾಡ ಪ್ರವೇಶಿಸಿದರೆ ಈವರೆಗಿನ ರಾಜಕೀಯ ಬೆಳವಣಿಗೆಗಳು ಭವಿಷ್ಯದಲ್ಲಿ ತಿರುವುಮುರುವಾಗುವ ಸಾಧ್ಯತೆ ಇದೆ. ರಾಹುಲ್ ಗಾಂಧಿಯವರ ಪರಮಾಪ್ತರಾಗಿರುವ ಕೆ.ಸಿ.ವೇಣುಗೋಪಾಲ್ ಈವರೆಗೂ ಸಿದ್ದರಾಮಯ್ಯ ಅವರಿಗೆ ಅಭಯ ಹಸ್ತ ನೀಡುತ್ತಾ ಬಂದಿದ್ದಾರೆ.
ಒಂದೆಡೆ ಡಿ.ಕೆ.ಶಿವಕುಮಾರ್ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಯುತ್ತಿದ್ದು, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಮನವೊಲಿಸುವ ಪ್ರಯತ್ನಗಳು ನಡಯುತ್ತಿವೆ ಎಂದು ಹೇಳಲಾಗುತ್ತಿದೆ.


