ಕಲಬುರಗಿ: ನರೇಗಾ ಕಾಯ್ದೆ ರದ್ದುಗೊಳಿಸಿ ಮೋದಿ ಸರ್ಕಾರ ಬಡವರ ಬದುಕನ್ನುಕಸಿದುಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಸೇಡಂ ತಾಲ್ಲೂಕನಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ಇಲಾಖೆಗಳ ಅಡಿಯಲ್ಲಿ ರೂ 108.35 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ 75 ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ರೂ 579.68 ಕೋಟಿ ವೆಚ್ಚದ 292 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕೇಂದ್ರದ ಸರ್ಕಾರ ನರೇಗಾ ಯೋಜನೆಯನ್ನು ನಿಲ್ಲಿಸುತ್ತಿದೆ. ಹಳೆಯ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ 90% ಹಾಗೂ ರಾಜ್ಯ ಸರ್ಕಾರ 10%.ಹಣ ನೀಡಬೇಕಿತ್ತು. ಈಗಿನ ಹೊಸ ಕಾಯದೆ ಪ್ರಕಾರ ಕೇಂದ್ರ 60% ಹಾಗೂ ರಾಜ್ಯ 40% ಅನುದಾನ ಒದಗಿಸುವಂತೆ ಹೇಳಲಾಗುತ್ತಿದೆ. ರಾಜ್ಯಗಳಿಗೆ ಮೋದಿ ಹಾಗೂ ಬಿಜೆಪಿ ಸರ್ಕಾರ ಅನ್ಯಾಯ ಮಾಡುವ ಮೂಲಕ ಸತ್ಯಾನಾಶ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಹಾಗೂ ಕೃಷಿ ಕಾಯ್ದೆಯಂತೆ ಈ ಕಾಯದೆಯನ್ನು ವಾಪಾಸ್ ಪಡೆದುಕೊಳ್ಳಬೇಕು.
ಜಿ ರಾಮ್ ಜೀ ಕಾಯ್ದೆ ವಿರುದ್ದ ದೇಶವ್ಯಾಪಿ ಹೋರಾಟಕ್ಕೆ ಕರೆನೀಡಿದ ಖರ್ಗೆ, ಕೇಂದ್ರದ ಬೇಡಿಕೆಯಂತೆ ರಾಜ್ಯಗಳು ತಮ್ಮ 40% ಅನುದಾನ ಕೊಡಲು ಅಶಕ್ತವಾಗಿವೆ. ನಾವು ಜಿ ರಾಮ್ ಜಿಯನ್ನು ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷ ಮಹಾತ್ಮಾಗಾಂಧಿ ಹೆಸರಿನಿಂದ ಜಾರಿಗೆ ತಂದ ಕಾಯಿದೆಯನ್ನ ಅಶಕ್ತಗೊಳಿಸಲು ಬಿಡುವುದಿಲ್ಲ ಎಂದು ಗಟ್ಟಿ ಧ್ವನಿ ಯಲ್ಲಿ ಹೇಳಿದರು.
ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಆಹಾರ ಹಕ್ಕು ಹಾಗೂ ಆರೋಗ್ಯದ ಹಕ್ಕು ಒದಗಿಸುವ ಕಾಯಿದೆಗಳನ್ನು ಸೋನಿಯಾಗಾಂಧಿ ಅವರು ಮಾಡಿದ್ದರು. ಕಾಂಗ್ರೆಸ್ ರಾಜ್ಯದಲಿ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮನಮೋಹನ್ ಸಿಂಗ್ ಹಾಗೂ ಸೋನಿಯಾಗಾಂಧಿ ಜಾರಿಗೊಳಿಸಿದ ಕಾಯ್ದೆಗಳನ್ನು ಜಾರಿಗೆ ತಂದಿದೆ.
ನಾನು ಕೇಂದ್ರ ಕಾರ್ಮಿಕಸಚಿವನಾಗಿದ್ದಾಗ G 20 ರಾಷ್ಟ್ರಗಳ ಪೈಕಿ 18 ರಾಷ್ಟ್ರ ಗಳಿಗೆ ಭೇಟಿ ನೀಡಿದ್ದಾರೆ. ಮನಮೋಹನ್ ಸಿಂಗ್ ಅವರ ಬಡವರ, ಕಾರ್ಮಿಕರ ಪರವಾದ ಕಾನೂನು ಜಾರಿಗೆ ತಂದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು. ಆಹಾರ ಕಾಯ್ದೆ, ಶಿಕ್ಷಣ ಕಾಯ್ದೆ ಯಂತ ಬಡವರಪರವಾದ ಕಾಯ್ದೆಗಳ ಬಗ್ಗೆ ಎಲ್ಲೆಲ್ಲೆಯೂ ಹೊಗಳಿಕೆ ವ್ಯಕ್ತವಾಗುತ್ತಿತ್ತು ಎಂದರು.
ಸಚಿವ ಶರಣಪ್ರಕಾಶ ಪಾಟೀಲ್ ಸೇಡಂ ಕ್ಷೇತ್ರದಲ್ಲಿ ಅಪಾರ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಈ ಹಿಂದೆ ಎಂದು ಇಷ್ಟೊಂದು ಅನುದಾನದಲ್ಲಿ ಅಭಿವೃದ್ದಿಯಾಗಿರಲಿಲ್ಲ. ಇದು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
1978 ರಲ್ಲಿ ಗುರುಮಠಕಲ್ ನಲ್ಲಿ ಚುನಾವಣೆಗೆ ನಿಂತಾಗ ಇಂದಿರಾಗಾಂಧಿ ಅವರನ್ನು ಕರೆದುಕೊಂಡುಬಂದಿದ್ದೆ. ಆಗ ಅಧಿಕಾರದಲ್ಲಿದ್ದ ಜನತಾಪಕ್ಷ ಸರ್ಕಾರ ಅವರಿಗೆ ಯಾವುದೇ ವಾಹನ ಸೌಲಭ್ಯ ಕೊಡುತ್ತಿರಲಿಲ್ಲ. ಅವರು ಸೇಡಂ ನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಚಿಂಚೋಳಿಗೆ ಹೋಗಿದ್ದರು. ಅಂದಿನಿಂದಲೂ ಕಾಂಗ್ರೆಸ್ ಪಕ್ಷ ಯಾರನ್ನೂ ಕೈ ಬಿಟ್ಟಿಲ್ಲ ಎಂದು ಅಂದಿನ ಸನ್ನಿವೇಶವನ್ನು ನೆನಪಿಸಿಕೊಂಡರು.
Article 371 J ಪ್ರಕಾರ ಕಕ ಭಾಗಕ್ಕೆ ಪ್ರತಿವರ್ಷ 5000 ಕೋಟಿ ಅನುದಾನ ಹಾಗೂ ವಿಶೇಷ ಪ್ರಾಧಿನಿದ್ಯದ ಅಡಿಯಲ್ಲಿ ಶೈಕ್ಷಣಿಕ ಹಾಗೂ ನೇಮಕಾತಿಗೆ ಅನುಕೂಲವಾಗಿದೆ ಎಂದ ಖರ್ಗೆ, ನಿಮಗೆ ಒಳ್ಳೆಯದನ್ನು ಮಾಡಿದವರ ನೆನಪಿಟ್ಟುಕೊಳ್ಳಬೇಕೆಂದು ಸಭಿಕರಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ ಖರ್ಗೆ, ನಿಮ್ಮ ಪರ ಕೆಲಸ ಮಾಡದವರ ಪರ ಭಜನೆ ಮಾಡಬೇಡಿ ಎಂದರು.
ಪ್ರಾಸ್ತಾವಿಕ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ ಸೇಡಂ ಮತಕ್ಷೇತ್ರದ ಅಭಿವೃದ್ದಿಗಾಗಿ ಇದುವರೆಗೆ ಸುಮಾರು ರೂ 1000 ಕೋಟಿ ಖರ್ಚು ಮಾಡಲಾಗಿದೆ. ಸುಮಾರು 300 ಕೋಟಿ ವೆಚ್ಚದಲ್ಲಿ 8,000 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮತ್ತೆ 10,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಅವರು ಸಿಎಂ ಅವರಿಗೆ ಮನವಿ ಮಾಡಿದರು.
ಮುಂದುವರೆದು ಮಾತನಾಡಿದ ಸಚಿವರು, ವಾಗ್ಧರಿ- ರಿಬ್ಬನಪಲ್ಲಿ ನಡುವಿನ ಸೋಲ್ ಲೈನ್ ಹೆದ್ದಾರಿ ಹಾಗೂ ಸೇಡಂ ಪಟ್ಟಣಲ್ಲಿ ಬೇಳೆ ಕಾಳು ಅಭಿವೃದ್ದಿ ಸಂಸ್ಥೆ ಸ್ಥಾಪನೆ ಮಾಡುವಂತೆ ಅವರು ಸಿಎಂ ಅವರಿಗೆ ಮನವಿ ಸಲ್ಲಿಸಿ, ಕಾಂಗ್ರೆಸ್ ಪಕ್ಷ ಚುನಾವಣೆ ಮುಂಚೆ ನೀಡಿದ ವಾಗ್ಧಾನದಂತೆ ಐದು ಗ್ಯಾರಂಟಿ ಯೋಜನೆಗಳನ್ನುಅನುಷ್ಠಾನಗೊಳಿಸ ನುಡಿದಂತೆ ನಡೆದಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸಚಿವ ಡಾ ಶರಣಪ್ರಕಾಶ ಪಾಟೀಲ ಕೇವಲ ಸೇಡಂ, ಕಲಬುರಗಿ ಹಾಗೂ ರಾಯಚೂರಿಗೆ ಸಂಬಂಧಿಸಿದ ಸಚಿವರಲ್ಲಅವರು ಇಡೀ ರಾಜ್ಯದ ಆಸ್ತಿ ಎಂದು ಹೊಗಳಿ ಅಂತಹ ಸಜ್ಜನ ಹಾಗೂ ಅಭಿವೃದ್ದಿಪರ ನಾಯಕರನ್ನು ಪಡೆದಿರುವುದು ಭಾಗ್ಯ ಎಂದರು.
ಕೌಶಲ್ಯಾಭಿವೃದ್ದಿಗೆ ಸಚಿವರು ಒತ್ತು ನೀಡಿದ್ದು, GTTC ನಲ್ಲಿ ತರಬೇತಿ ನೀಡಲು ಜರ್ಮನ್ ನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. GTTC ಅಲ್ಲಿ ತರಬೇತಿ ಪಡೆದುಕೊಂಡ ಯುವಕರಿಗೆ ಉದ್ಯೋಗ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಕಾಗಿಣಾ ನದಿಗೆ ಅಡ್ಡಲಾಗಿ ಏತ ನೀರಾವರಿ ಯೋಜನೆಗೆ ಒದಗಿಸಲು ರೂ 500 ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
” Article 371 ಜೆ ಜಾರಿಗೆ ತರಲು ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಅವಿರತ ಶ್ರಮಿಸಿದ್ದಾರೆ. ಮುಂದಿನ ಜನಾಂಗದವರಿಗೆ ಇದರಿಂದ ಅನುಕೂಲವಾಗಲಿದೆ. ಅವರ ಈ ಸಾಧನೆ ವರ್ಷಗಳ ಕಾಲ ಜನರ ನೆನಪಿನಲ್ಲಿ ಉಳಿಯಲಿದೆ” ಎಂದು ಡಿಸಿಎಂ ಹೇಳಿದರು.
ವೇದಿಕೆಯ ಮೇಲೆ , ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅದ್ಯಕ್ಷ ಡಾ ಅಜಯ್ ಸಿಂಗ್, ಎಂ ಎಲ್ ಸಿ ಜಗದೇವ ಗುತ್ತೇದಾರ, ಚಂದ್ರ ಶೇಖರ್ ಪಾಟೀಲ, ಕೆಕೆಆರ್ ಟಿಸಿ ಅಧ್ಯಕ್ಷ ಅರುಣ್ ಕುಮಾರ ಎಂ ವೈ ಪಾಟೀಲ, ಜೆಸ್ಕಾಂ ಎಂಡಿ ಪ್ರವೀಣ್ ಹರವಾಳ, ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್ ಮಹಮ್ಮದ್ ಅಲಿ ಅಲ್ ಹುಸೇನಿ, ಡಿಐಜಿ ಶಂತನು ಸಿನ್ಹಾ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಲವರಿದ್ದರು.


