Menu

ಜಗ-ಜೀವನ: ಬೇಕಿದೆ ನೀರು ಕುಡಿದು ಬದುಕುವ ಗ್ಯಾರಂಟಿ !

cauvery water

ಭಾರತದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಅಪಾಯಕಾರಿ ಮಟ್ಟವನ್ನು ಮೀರಿದೆ. ದೇಶದಲ್ಲಿ ಪ್ರತಿವರ್ಷ ಅಂದಾಜು ೨ ಲಕ್ಷ ಜನರು ಕಲುಷಿತ ನೀರಿನ ಸೇವನೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂದರೆ, ಪ್ರತಿದಿನ ಸರಾಸರಿ ೫೦೦ಕ್ಕೂ ಹೆಚ್ಚು ಮನೆಗಳಲ್ಲಿ ಮೌನ ಕೊಲೆಗಳು ನಡೆಯುತ್ತಿವೆ.

“Thousands have lived without love, not one without water.” (ಪ್ರೀತಿ ಇಲ್ಲದೇ ಸಾವಿರಾರು ಜನ ಬದುಕಿದ್ದಾರೆ, ಆದರೆ ಹನಿ ನೀರಿಲ್ಲದೇ ಯಾರೂ ಬದುಕಲಾರರು)

ಇಂಗ್ಲಿಷಿನ ಖ್ಯಾತ ಕವಿ ಡಬ್ಲ್ಯುಎಚ್ ಆಡೆನ್ ಅವರ ಸಾಲುಗಳು ನೀರಿನ ಮಹತ್ವನ್ನು, ಅದರ ಉಪಯುಕ್ತತೆಯನ್ನು ಮತ್ತು ಉಸಿರ ಜೊತೆ ಅದರ ನಂಟನ್ನು ಸರಳವಾಗಿ ಹೇಳುತ್ತದೆ. ಒಂದರ್ಥದಲ್ಲಿ ನೀರೂ ಸಹ ಸವಾಂತರ್ಯಾಮಿಯೇ. ಅಂದರೆ ಅದರ ವ್ಯಾಪ್ತಿ ಅಷ್ಟು ಅಗಾಧವಾದುದು. ಆದರೆ ಅದೇ ನೀರು ಜನರ ಜೀವ ತೆಗೆಯುವಂತಾದರೆ… ಊಹಿಸುವುದೂ ಕಷ್ಟ. ಜೀವ ಜಲ ವಿಷವಾಗುವುದೆಂದರೆ ಅದು ಸೃಷ್ಟಿ ತಲೆಕೆಳಗಾದಂತೆಯೇ ಸರಿ. ಆದರೆ ಇದು ಇಂದಿನ ವಾಸ್ತವವೂ ಹೌದು.

ಭಾರತದ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ, ದೇಶದ ಮೂಲಸೌಕರ್ಯ ಮತ್ತು ಡಿಜಿಟಲ್ ಕ್ರಾಂತಿಯ ಬಗ್ಗೆ ನಾವು ಹೆಮ್ಮೆಯಿಂದ ಮಾತನಾಡುತ್ತೇವೆ. ಬಾಹ್ಯಾಕಾಶದಲ್ಲಿನ ಸಾಧನೆಗಳು ಮತ್ತು ಮುಗಿಲೆತ್ತರದ ಕಟ್ಟಡಗಳು ನಮ್ಮ ಅಭಿವೃದ್ಧಿಯ ಸಂಕೇತಗಳಾಗಿ ಬಿಂಬಿತವಾಗುತ್ತಿವೆ. ಆದರೆ, ಈ ಹೊಳೆಯುವ ಚಿತ್ರಣದ ಬೆನ್ನಲ್ಲೇ ಒಂದು ಭೀಕರ ಹಾಗೂ ಕಹಿ ಸತ್ಯ ಇಂದಿಗೂ ನಮ್ಮನ್ನು ಕಾಡುತ್ತಿದೆ.

ಅದೆಂದರೆ ಲಕ್ಷಾಂತರ ಸಾಮಾನ್ಯ ಪ್ರಜೆಗಳು ಒಂದು ಲೋಟ ಶುದ್ಧ ಕುಡಿಯುವ ನೀರಿಗಾಗಿ ಪ್ರತಿದಿನ ಸಂಘರ್ಷ ನಡೆಸುತ್ತಿದ್ದಾರೆ. ನೀರು ಎಂಬುದು ಮನುಷ್ಯನ ಅತ್ಯಂತ ಮೂಲಭೂತ ಹಕ್ಕಾಗಿ ಉಳಿಯುವ ಬದಲು, ಕೇವಲ ಅದೃಷ್ಟವಂತರಿಗೆ ಮಾತ್ರ ಲಭಿಸುವ ಐಷಾರಾಮಿ ವಸ್ತುವಾಗುತ್ತಿರುವುದು ಈ ದೇಶದ ಬಹುದೊಡ್ಡ ಮಾನವೀಯ ದುರಂತವಾಗಿದೆ.

2026ರ ಈ ಸುಧಾರಿತ ಕಾಲಘಟ್ಟದಲ್ಲೂ ಜೀವಜಲವು ಮೃತ್ಯುಜಲವಾಗಿ ಮಾರ್ಪಡುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯ ಅತಿ ದೊಡ್ಡ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಇತ್ತೀಚೆಗೆ ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದ ಘಟನೆಗಳು ಇಡೀ ದೇಶದ ವ್ಯವಸ್ಥಿತ ಲೋಪಗಳಿಗೆ ಸಾಕ್ಷಿಯಾಗಿವೆ. ಅತ್ಯಂತ ಸ್ವಚ್ಛ ನಗರವೆಂದು ಸತತವಾಗಿ ಗುರುತಿಸಿಕೊಂಡಿರುವ ಇಂದೋರಲ್ಲಿ, ಕುಡಿಯುವ ನೀರಿನ ಪೈಪ್ಲೈನ್‌ಗಳಲ್ಲಿ ಒಳಚರಂಡಿ ನೀರು ಬೆರೆತ ಪರಿಣಾಮವಾಗಿ ಕನಿಷ್ಠ ೧೫ ಜನರು ಮೃತಪಟ್ಟಿದ್ದು ವ್ಯವಸ್ಥೆಯ ಸ್ವಚ್ಛತೆಗೆ ಹಿಡಿದ ಕೈಗನ್ನಡಿಯಾಗಿದೆ.

ಇದು ಕೇವಲ ಇಂದೋರಿನ ಕತೆಯಲ್ಲ; ಗುಜರಾತಿನ ಮಹಿ ಸಾಗರ್ ಜಿಲ್ಲೆಯಲ್ಲಿ ಕಾಮಾಲೆ ರೋಗ ಹರಡಲು ಕಲುಷಿತಗೊಂಡ ನೀರು ಕಾರಣವಾದರೆ, ತಮಿಳುನಾಡಿನ ತಿರುವಳ್ಳೂರಿನಲ್ಲಿ ನಳದ ನೀರೇ ಜನರನ್ನು ಸಾವು-ನೋವಿನ ಅಂಚಿಗೆ ತಳ್ಳಿದೆ.

ಒಂದು ದಶಕದ ಹಿಂದೆ ಒಡಿಶಾದ ಸಂಭಲ್ಪುರದಲ್ಲಿ ಹರಡಿದ್ದ ಹೆಪಟೈಟಿಸ್ ಸಾಂಕ್ರಾಮಿಕವು ಇಡೀ ಹಳ್ಳಿಗಳನ್ನೇ ಆವರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಬೆಂಗಳೂರಿನಂತಹ ದೊಡ್ಡೂರಿನಲ್ಲೂ ಈ ಸಮಸ್ಯೆ ವ್ಯಾಪಕವಾಗಿದೆ. ವಾರದ ಹಿಂದಷ್ಟೇ ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಬೆರೆತು ಬಂದ ಉದಾಹರಣೆ ಕಣ್ಣ ಮುಂದಿದೆ.

ಇಂತಹ ಘಟನೆಗಳನ್ನು ಅಧಿಕಾರಿಗಳು ಸ್ಥಳೀಯ ತಾಂತ್ರಿಕ ಲೋಪ ಎಂದು ಕರೆದು ಜಾರಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಇವು ಸುರಕ್ಷಿತ ನೀರು ಪೂರೈಕೆಯ ಹಾದಿಯಲ್ಲಿರುವ ವ್ಯವಸ್ಥಿತ ಆಡಳಿತಾತ್ಮಕ ಕುಸಿತದ ಲಕ್ಷಣಗಳಾಗಿವೆ. ಈ ವೈಫಲ್ಯವು ಯಾವುದೇ ಒಂದು ನಿರ್ದಿಷ್ಟ ರಾಜ್ಯಕ್ಕೆ ಸೀಮಿತವಾಗಿಲ್ಲ; ಇದು ಭೌಗೋಳಿಕ ಗಡಿಗಳನ್ನು ಮೀರಿ ಇಡೀ ದೇಶವನ್ನು ಪೀಡಿಸುತ್ತಿರುವ ಗಂಭೀರ ಸಮಸ್ಯೆಯಾಗಿದೆ.

ಅಪಾಯಕಾರಿ ಪರಿಸ್ಥಿತಿ

ಭಾರತದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಅಪಾಯಕಾರಿ ಮಟ್ಟವನ್ನು ಮೀರಿದೆ. ದೇಶದಲ್ಲಿ ಪ್ರತಿವರ್ಷ ಅಂದಾಜು ೨ ಲಕ್ಷ ಜನರು ಕಲುಷಿತ ನೀರಿನ ಸೇವನೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂದರೆ, ಪ್ರತಿದಿನ ಸರಾಸರಿ ೫೦೦ಕ್ಕೂ ಹೆಚ್ಚು ಮನೆಗಳಲ್ಲಿ ಮೌನ ಕೊಲೆಗಳು ನಡೆಯುತ್ತಿವೆ. ಸುಮಾರು ೬೦ ಕೋಟಿ ಭಾರತೀಯರು ತೀವ್ರ ನೀರಿನ ಅಭಾವದ ಸುಳಿಗೆ ಸಿಲುಕಿದ್ದಾರೆ. ಸಿಗುತ್ತಿರುವ ನೀರಿನಲ್ಲಿಯೂ ಶೇ. ೭೦ ರಷ್ಟು ಭಾಗ ಕಲುಷಿತಗೊಂಡಿದೆ. ನಾವು ವಿಶ್ವಗುರು ಎಂದು ಹೆಮ್ಮೆಯಿಂದ ಬಿಂಬಿಸಿಕೊಳ್ಳುವ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ. ೪೦ ರಷ್ಟು ಜನರಿಗೆ ದಿನದ ಕನಿಷ್ಠ ಅಗತ್ಯಕ್ಕೆ ಬೇಕಾದಷ್ಟು ನೀರು ಸಿಗುತ್ತಿಲ್ಲ ಎಂದರೆ ಅದು ನಾಚಿಕೆಗೇಡಿನ ವಿಷಯವೇ ಸರಿ

ಸಮನ್ವಯದ ಕೊರತೆ

ನೀರಿನ ನಿರ್ವಹಣೆ ಭಾರತದಲ್ಲಿ ಹತ್ತಾರು ಇಲಾಖೆಗಳ ನಡುವೆ ಹರಿದು ಹಂಚಿಹೋಗಿದೆ. ಜಲಶಕ್ತಿ ಇಲಾಖೆ, ಪರಿಸರ ಇಲಾಖೆ, ನಗರಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳ ನಡುವೆ ಯಾವುದೇ ಸರಿಯಾದ ಸಮನ್ವಯವಿಲ್ಲ.

ಒಂದು ದೊಡ್ಡ ಸಮಸ್ಯೆ ಅಥವಾ ಸಾವುಗಳು ಸಂಭವಿಸಿದಾಗ ಜವಾಬ್ದಾರಿ ಹೊರಬೇಕಾದ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಬೆರಳು ತೋರುತ್ತಾ ಕಾಲಹರಣ ಮಾಡುತ್ತಾರೆ. ಯಾರೂ ಅಂತಿಮ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ.

ಮತ್ತೊಂದೆಡೆ, ಕೇಂದ್ರ ಸರ್ಕಾರದ ’ಜಲ ಜೀವನ್ ಮಿಷನ್’ನಂತಹ ಯೋಜನೆಗಳು ಎಷ್ಟು ಮನೆಗಳಿಗೆ ಹೊಸದಾಗಿ ಪೈಪ್ ಸಂಪರ್ಕ ನೀಡಲಾಗಿದೆ ಎಂಬದರ ಮೇಲೆ ನೀಡುವಷ್ಟು ಗಮನವನ್ನು ಆ ನಳಗಳಲ್ಲಿ ಬರುತ್ತಿರುವ ನೀರು ಕುಡಿಯಲು ಸುರಕ್ಷಿತವಾಗಿದೆಯೇ ಎಂಬುದನ್ನು ನಿರಂತರವಾಗಿ ಪರೀಕ್ಷಿಸುವ ತಂತ್ರಜ್ಞಾನ ಅಥವಾ ಇಚ್ಛಾಶಕ್ತಿ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಇಲ್ಲವಾಗಿದೆ. ಪೈಪ್ ಅಳವಡಿಸುವುದು ಅರ್ಧ ಕೆಲಸವಾದರೆ, ಶುದ್ಧ ನೀರನ್ನು ನಿರಂತರವಾಗಿ ಪೂರೈಸುವುದು ಆಡಳಿತದ ನಿಜವಾದ ಸವಾಲು ಮತ್ತು ಕರ್ತವ್ಯವೂ ಆಗಿದೆ.

ಗ್ರಾಮೀಣ ಭಾಗದ ಶೇ. ೮೦ ರಷ್ಟು ಜನರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಭೂಮಿಯ ಆಳದಿಂದ ನೀರನ್ನು ಎತ್ತುವ ಪ್ರಕ್ರಿಯೆಯಲ್ಲಿ ಸೀಸ, ಆರ್ಸೆನಿಕ್, ಫ್ಲೋರೈಡ್ ಮತ್ತು ನೈಟ್ರೇಟ್‌ಗಳಂತಹ ವಿಷಕಾರಿ ರಾಸಾಯನಿಕಗಳು ನೀರಿನಲ್ಲಿ ಬೆರೆಯುತ್ತಿವೆ. ಇದರಿಂದಾಗಿ ಲಕ್ಷಾಂತರ ಜನರು ಕ್ಯಾನ್ಸರ್, ಮೂಳೆ ಸಂಬಂಧಿತ ಮಾರಕ ರೋಗಗಳು ಮತ್ತು ಕಿರಿಯ ವಯಸ್ಸಿನಲ್ಲೇ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ.

ಪಂಜಾಬ್ ಮತ್ತು ಬಂಗಾಳದ ಕೆಲವು ಭಾಗಗಳಲ್ಲಿ ಇಡೀ ಹಳ್ಳಿಯ ಜನರೇ ಆರ್ಸೆನಿಕ್ ವಿಷಕ್ಕೆ ಬಲಿಯಾಗುತ್ತಿರುವುದು, ನಮ್ಮದೇ ಚಿಕ್ಕಬಳ್ಳಾಪುರದಲ್ಲಿ ಜನ ಫ್ಲೂರೋಸಿಸ್ ಸಮಸ್ಯೆಯಿಂದ ಬಾಧೆ ಪಡುತ್ತಿರುವುದನ್ನು ನೋಡುತ್ತಿದ್ದೇವೆ.

ಇದಕ್ಕೆ ಪೂರಕವೆಂಬಂತೆ, ಭಾರತದ ನಗರಗಳಲ್ಲಿ ಉತ್ಪತ್ತಿಯಾಗುವ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ನೀರಿನಲ್ಲಿ ಕೇವಲ ಮೂರನೇ ಒಂದು ಭಾಗ ಮಾತ್ರ ಸರಿಯಾಗಿ ಸಂಸ್ಕರಿಸಲ್ಪಡುತ್ತಿದೆ. ಉಳಿದ ಶೇ. ೭೦ ರಷ್ಟು ವಿಷಕಾರಿ ತ್ಯಾಜ್ಯ ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ನದಿ ಮತ್ತು ಕೆರೆಗಳಿಗೆ ಸೇರುತ್ತಿದೆ. ನಾವು ಯಾವ ಮೂಲಗಳಿಂದ ನೀರನ್ನು ಪಡೆಯುತ್ತಿದ್ದೇವೆಯೋ, ಅದೇ ಮೂಲಗಳು ಇಂದು ವಿಷದ ತೊಟ್ಟಿಗಳಗುತ್ತಿವೆ.

ನೀರಿನ ಸಮಸ್ಯೆಯಿಂದ ಸಾಯುವವರಲ್ಲಿ ಹೆಚ್ಚಿನವರು ಬಡವರು, ಕೊಳೆಗೇರಿ ನಿವಾಸಿಗಳು ಮತ್ತು ಗ್ರಾಮೀಣ ಭಾಗದ ಶೋಷಿತ ವರ್ಗದವರು. ಹೀಗಾಗಿಯೇ, ಈ ಸಾವುಗಳು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುವುದಿಲ್ಲ ಅಥವಾ ರಾಜಕೀಯವಾಗಿ ಸಂಚಲನ ಮೂಡಿಸುವುದಿಲ್ಲ.

ವಾಯು ಮಾಲಿನ್ಯದ ಬಗ್ಗೆ ನಗರದ ಶ್ರೀಮಂತ ಜನರು ದನಿ ಎತ್ತುವಂತೆ, ಕುಡಿಯುವ ನೀರಿನಲ್ಲಿರುವ ವಿಷದ ಬಗ್ಗೆ ದನಿ ಎತ್ತುವವರಿಲ್ಲ. ಮಹಿಳೆಯರು ಕಿಲೋಮೀಟರ್‌ಗಟ್ಟಲೆ ನಡೆದು ನೀರು ತರುವುದು ಇಂದಿಗೂ ಒಂದು ಸಾಮಾಜಿಕ ಸಂಪ್ರದಾಯ ಎಂಬಂತೆ ನೋಡಲಾಗುತ್ತಿದೆ ಹೊರತು, ಅದೊಂದು ಮಾನವ ಹಕ್ಕಿನ ಉಲ್ಲಂಘನೆ ಎಂದು ಯಾರೂ ಪರಿಗಣಿಸುತ್ತಿಲ್ಲ.

ಇದು ಒಂದು ದೇಶದ ಅವನತಿ

ಕಲುಷಿತ ನೀರು ಜೀವಗಳ ಜೊತೆಗೆ ದೇಶದ ಆರ್ಥಿಕತೆಯನ್ನೂ ಅವಸಾನದತ್ತ ತಳ್ಳುತ್ತದೆ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. ಜಲಜನ್ಯ ರೋಗಗಳಿಂದಾಗಿ ಪ್ರತಿವರ್ಷ ಭಾರತದ ಸುಮಾರು ೩.೮ ಕೋಟಿ ಕೆಲಸದ ದಿನಗಳು ನಷ್ಟವಾಗುತ್ತಿವೆ. ಇದರಿಂದ ದೇಶಕ್ಕೆ ವಾರ್ಷಿಕ ಸುಮಾರು 600 ಮಿಲಿಯನ್ ಡಾಲರ್ ಆರ್ಥಿಕ ನಷ್ಟವಾಗುತ್ತಿದೆ. ಬಡ ಕುಟುಂಬಗಳ ಆರೋಗ್ಯ ವೆಚ್ಚ ಮಿತಿಮೀರುತ್ತಿದ್ದು, ಇದು ಬಡತನ ನಿರ್ಮೂಲನೆಯ ಹಾದಿಯಲ್ಲಿ ನಾವು ಎದುರಿಸುತ್ತಿರುವ ಅತಿದೊಡ್ಡ ತಡೆಯಾಗಿದೆ.

ಈ ಬಿಕ್ಕಟ್ಟನ್ನು ನೀಗಿಸಲು ಕೇವಲ ಹೊಸ ಯೋಜನೆಗಳ ಘೋಷಣೆ ಸಾಲದು. ಬದಲಿಗೆ ವ್ಯವಸ್ಥಿತವಾದ ಸಾಂಸ್ಥಿಕ ಬದಲಾವಣೆ ಬೇಕಿದೆ. ನೀರಿನ ಮಲಿನ್ಯ ಅಥವಾ ಶುದ್ಧ ನೀರು ಪೂರೈಕೆಯ ವೈಫಲ್ಯಕ್ಕೆ ನೇರ ಜವಾಬ್ದಾರಿಯನ್ನು ಅಧಿಕಾರಿಗಳ ಮೇಲೆ ನಿಗದಿಪಡಿಸಬೇಕು.

ಪ್ರತಿ ವಾರ್ಡ್ ಅಥವಾ ಗ್ರಾಮದಲ್ಲಿ ನೀರಿನ ಗುಣಮಟ್ಟವನ್ನು ಅಳೆಯುವ ಡಿಜಿಟಲ್ ಸಂವೇದಕಗಳನ್ನು ಅಳವಡಿಸಬೇಕು ಮತ್ತು ಆ ಮಾಹಿತಿ ಜನರಿಗೆ ನಿರಂತರವಾಗಿ ಲಭ್ಯವಿರಬೇಕು. ನೂರು ವರ್ಷ ಹಳೆಯದಾದ ಪೈಪ್ಲೈನ್‌ಗಳನ್ನು ಬದಲಿಲಾತದಷ್ಟುವ ಯವಸ್ಥೆ ಜಡ್ಡುಗಟ್ಟಿದೆ ಎ<ದರೆ ಅಂತಹ ವ್ಯವಸ್ಥೆ ಇದ್ದೂ ಸತ್ತಂತೆ.

ಭಾರತವು ವಿಶ್ವ ಗುರು ಎಂದು ಹೇಳಿಕೊಳುತ್ತದೆ. ಆದರೆ, ತನ್ನ ಪ್ರಜೆಗಳಿಗೆ ಒಂದು ತಂಬಿಗೆ ಶುದ್ಧ ನೀರನ್ನು ನೀಡಲಾಗದಿದ್ದರೆ ಆ ಅಭಿವೃದ್ಧಿಗೆ ಯಾವುದೇ ನೈತಿಕ ಅರ್ಥವಿರುವುದಿಲ್ಲ. ವರ್ಷಕ್ಕೆ ೨ ಲಕ್ಷ ಜನರ ಬಲಿ ಎಂಬುದು ಕೇವಲ ಒಂದು ಅಂಕಿ-ಅಂಶವಲ್ಲ, ಅದು ಒಂದು ರಾಷ್ಟ್ರೀಯ ದುರಂತ.

ನಾವು ನದಿಗಳನ್ನು ಪೂಜಿಸುತ್ತೇವೆ, ಆದರೆ ಅದಕ್ಕೆ ವಿಷ ಬೆರೆಸುತ್ತಿದ್ದೇವೆ. ಸರ್ಕಾರಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ, ಕೆಳಮಟ್ಟದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ನೀರು ತಲುಪುವಂತೆ ನೋಡಿಕೊಳ್ಳಬೇಕಿದೆ.

ಇಲ್ಲದಿದ್ದರೆ, ಅಭಿವೃದ್ಧಿಯ ಹೆಸರಿನಲ್ಲಿ ನಾವು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ಬರಿ ಸ್ಮಶಾನಗಳನ್ನು ಮಾತ್ರ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಲಿ; ನೀರು ಬದುಕಿಗೆ ಆಧಾರವಾಗಲಿ, ಸಾವಿನ ಕಾರಣವಾಗದಿರಲಿ.

-ಕೆ. ಎಸ್ ಜಗನ್ನಾಥ್

Related Posts

Leave a Reply

Your email address will not be published. Required fields are marked *