ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಹಿಂದಿ ನಿಮ್ಮ ಭಾಷೆ, ನಮ್ಮದಲ್ಲ. ನನಗೆ ಆ ಭಾಷೆಯ ಬಗ್ಗೆ ದ್ವೇಷವಿಲ್ಲ. ಆದರೆ ನೀವು ಅದನ್ನು ನಮ್ಮ ಮೇಲೆ ಬಲವಂತವಾಗಿ ಹೇರಲು ಬಂದರೆ ನಾನು ಒದ್ದು ಓಡಿಸುತ್ತೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಅವರು, ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಮರಾಠಿಗರ ಪಾಲಿನ ‘ಅಳಿವು-ಉಳಿವಿನ ಪ್ರಶ್ನೆ’ ಎಂದರು, ಹಿಂದಿ ಹೇರಿಕೆ ವಿಚಾರವಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗರಿಗೆ ಎಚ್ಚರಿಕೆ ನೀಡಿದರು.
ಸಹೋದರ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ವೇದಿಕೆ ಹಂಚಿಕೊಂಡ ರಾಜ್ ಠಾಕ್ರೆ, ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮರಾಠಿ ಅಸ್ಮಿತೆಗಾಗಿ ಒಂದಾಗುವ ಸಂದೇಶ ನೀಡಿದರು.
ಬಿಎಂಸಿ ಚುನಾವಣೆ ಕೇವಲ ಪಾಲಿಕೆಯ ಅಧಿಕಾರ ಹಿಡಿಯುವ ವಿಷಯವಲ್ಲ, ನಿರ್ಣಾಯಕ ಕ್ಷಣ ಎಂದು ರಾಜ್ ಠಾಕ್ರೆ ಹೇಳಿದರು. ಮಹಾರಾಷ್ಟ್ರಕ್ಕೆ ಲಗ್ಗೆ ಇಡುತ್ತಿರುವವರು ನಿಮ್ಮ ಪಾಲನ್ನು ಕಸಿದುಕೊಳ್ಳುತ್ತಿದ್ದಾರೆ. ಭೂಮಿ ಮತ್ತು ಭಾಷೆ ಎರಡೂ ಹೋದರೆ ನೀವು ಮುಗಿದುಹೋದಂತೆ. ಈ ಚುನಾವಣೆ ಅವಕಾಶ ತಪ್ಪಿಸಿಕೊಂಡರೆ ಮುಂದೆಂದೂ ಸಿಗಲಾರದು. ಮುಂಬೈಯನ್ನು ಮಹಾರಾಷ್ಟ್ರದ ಭಾಗವಾಗಿಸಲು ಹಿರಿಯರು ಮಾಡಿದ ತ್ಯಾಗವನ್ನು ಸ್ಮರಿಸಿ ಒಂದಾಗಿ ಎಂದು ಕರೆ ನೀಡಿದರು.
ಚುನಾವಣಾ ಅಕ್ರಮಗಳ ಬಗ್ಗೆ ಎಚ್ಚರಿಸಿದ ಅವರು, ಮತದಾನದ ದಿನದಂದು ಕಾರ್ಯಕರ್ತರು ಇವಿಎಂ ಮೇಲೆ ಕಣ್ಣಿಡಬೇಕು ಮತ್ತು ಯಾರಾದರೂ ಎರಡನೇ ಬಾರಿ ಮತ ಚಲಾಯಿಸಲು ಬಂದರೆ ಹೊರಹಾಕಬೇಕು ಎಂದು ಸೂಚನೆ ನೀಡಿದರು.
ಮುಂಬೈ ನಗರ ಎದುರಿಸುತ್ತಿರುವ ಅಸ್ತಿತ್ವದ ಭೀತಿಯೇ ನಾವು ಮತ್ತೆ ಒಂದಾಗಲು ಕಾರಣ. ಮುಂಬೈಯನ್ನು ಹೊರಗಿನವರ ನಿಯಂತ್ರಣದಿಂದ ರಕ್ಷಿಸಲು ನಮ್ಮ ಮೈತ್ರಿ ಮಾತ್ರ ಸಮರ್ಥ ಪರ್ಯಾಯ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಹಿತಾಸಕ್ತಿಗಳನ್ನು ಕಡೆಗಣಿಸಿ ಗುಜರಾತ್ ಪರವಾದ ಅಜೆಂಡಾವನ್ನು ಬಿಜೆಪಿ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದ ನಾಯಕರಿಬ್ಬರು, ದೀರ್ಘಾವಧಿಯಲ್ಲಿ ಮುಂಬೈಯನ್ನು ಗುಜರಾತ್‌ನೊಂದಿಗೆ ಸಂಪರ್ಕಿಸುವುದು ಬಿಜೆಪಿ ಯೋಜನೆಯಾಗಿದೆ. ಬಿಎಂಸಿ ನಮ್ಮ ವಶದಲ್ಲಿದ್ದರೆ ಅವರು ಅದಾನಿಗೆ ಭೂಮಿ ಮಾರಲು ಸಾಧ್ಯವಿಲ್ಲ ಎಂದರು.


