ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ತಾನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಹೀಗೆಂದು ಟ್ರಂಪ್ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.
ಟ್ರಂಪ್ ತಮ್ಮ ಭಾವಚಿತ್ರದೊಂದಿಗೆ ‘ವೆನೆಜುವೆಲಾ ಹಂಗಾಮಿ ಅಧ್ಯಕ್ಷ – ಜನವರಿ 2026 ರಿಂದ ಅಧಿಕಾರರೂಢ’ ಎಂದು ಬರೆದುಕೊಂಡಿದ್ದಾರೆ. ಈ ಬೆಳವಣಿಗೆ ಅಂತಾತಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜನವರಿ 3ರಂದು ಅಮೆರಿಕದ ಸೇನೆ ರಾತ್ರೋರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದು ಬಂಧನದಲ್ಲಿಟ್ಟಿದೆ. ತೈಲ ಸಮೃದ್ಧ ವೆನೆಜುವೆಲಾದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ತೀವ್ರ ಒತ್ತಡ ಹೇರಿತ್ತು, ಬಳಿಕ ವೈಮಾನಿಕ ದಾಳಿಗಳ ಮೂಲಕ ಈ ಕಾರ್ಯಾಚರಣೆ ನಡೆಸಿದೆ.
ಮಡುರೊ ಬಂಧನದ ನಂತರ ಫ್ಲೋರಿಡಾದ ತಮ್ಮ ‘ಮಾರ್-ಎ-ಲಾಗೊ’ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಟ್ರಂಪ್, ಸುರಕ್ಷಿತ ಮತ್ತು ನ್ಯಾಯಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುವವರೆಗೂ ಅಮೆರಿಕ ಸರ್ಕಾರವೇ ವೆನೆಜುವೆಲಾದ ಆಡಳಿತವನ್ನು ನಡೆಸಲಿದೆ ಎಂದು ಹೇಳಿದ್ದರು. ವೆನೆಜುವೆಲಾದಲ್ಲಿರುವ ತೈಲ ಸಂಪನ್ಮೂಲಗಳನ್ನು ಬಳಸಿಕೊಂಡುಇತರ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವ ಬಗ್ಗೆಯೂ ಟ್ರಂಪ್ ಹೇಳಿದ್ದು, ಬಂಧನ ಕಾರ್ಯಾಚರಣೆಯನ್ನು
“ಅಮೆರಿಕದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದ ಪ್ರಬಲ ಪ್ರದರ್ಶನ” ಎಂದು ಹೇಳಿಕೊಂಡಿದ್ದರು.
ಈ ನಡುವೆ ವೆನೆಜುವೆಲಾದ ಸಾಂವಿಧಾನಿಕ ಬಿಕ್ಕಟ್ಟು ತೀವ್ರಗೊಂಡಿದೆ. ಜನವರಿ 3 ರಂದು ವೆನೆಜುವೆಲಾ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಆದೇಶ ಹೊರಡಿಸಿ ಮಡುರೊ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಹಂಗಾಮಿ ನಾಯಕಿ ರಾಡ್ರಿಗಸ್ ಅವರು, ಮದುರೊ ಅವರೇ ದೇಶದ ಕಾನೂನುಬದ್ಧ ನಾಯಕ ಎಂದು ಪ್ರತಿಪಾದಿಸಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಮೆರಿಕವನ್ನು ಒತ್ತಾಯಿಸಿದ್ದಾರೆ.


