ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು ಎಂಟು ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಾನಾ ಜಿಲ್ಲೆಗಳ ಶಾಲಾ ಶಿಕ್ಷಕರು, ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿದ್ದಾರೆ.
ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ದೂರು ಬೆಂಗಳೂರು ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿತ್ತು.
ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಶಾಲೆಗಳ ಶಿಕ್ಷಕರು ಈ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ. ತುಮಕೂರಿನ ಶಾಲೆಯ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹಶಿಕ್ಷಕ ಅಮ್ಜದ್ ಖಾನ್ ಸೇರಿದಂತೆ ಕಲಬುರಗಿ ಜಿಲ್ಲೆಯ ಶಿಕ್ಷಕರು ಹಾಗೂ ಸಹಶಿಕ್ಷಕರನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹಶಿಕ್ಷಕಿ ಫಾಹ್ಮಿದಾ ಹಾಗೂ ಶಿಕ್ಷಕಿ ಫರ್ಜಾನಾ ಬೇಗಂ ಇದ್ದಾರೆ. ಇಬ್ಬರು ವಿದ್ಯಾರ್ಥಿಗಳನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಯಾವ ರೀತಿಯಲ್ಲಿ ನಡೆದಿದೆ, ಇನ್ನಿತರರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.


