“ನಾನು ಯಾರ ಬೆನ್ನಿಗೆ ನಿಂತಿದ್ದೆನೋ ಅವರೇ ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ, ಆತ್ಮವಿಶ್ವಾಸವಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಉದ್ಯಮಿ ಒಕ್ಕಲಿಗ ಎಕ್ಸ್ಪೋ 2026 ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಅಧಿವೇಶನದಲ್ಲಿ ಒಮ್ಮೆ ಯಡಿಯೂರಪ್ಪ ಅವರಿಗೆ ಯಶಸ್ಸಿನ ಬಗ್ಗೆ ಒಂದು ಮಾತು ಹೇಳಿದ್ದೆ. ನಾವು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ನಮ್ಮಲ್ಲಿ ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕು. ಆಗ ಯಶಸ್ಸು ಸಾಧಿಸಲು ಸಾಧ್ಯ. ನಾನು ರಾಜಕೀಯವಾಗಿ ಅನೇಕ ಏಟು ತಿಂದಿದ್ದೇನೆ. ನನ್ನನ್ನು ಬಂಡೆ ಎನ್ನುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಚಿನ್ನಕ್ಕೆ ಹೆಚ್ಚು ಶಾಖ ಕೊಟ್ಟು ಕರಗಿಸಿದಾಗ ಮಾತ್ರ ಆಭರಣ ಮಾಡಬಹುದು. ನೀವು ಯಾವತ್ತೂ ನಿಷ್ಪ್ರಯೋಜಕ, ಸಣ್ಣವ ಎಂದು ಭಾವಿಸಬೇಡಿ. ನೀವು ನಿಮ್ಮ ಕರ್ತವ್ಯ ಮಾಡಿ. ಯಾರು ಯಾವಾಗ ಬೇಕಾದರೂ ಏನಾದರೂ ಆಗಬಹುದು. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಿದರು.
ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ನನಗಾಗಿ ಪ್ರಾರ್ಥನೆ ಮಾಡಿದಿರಿ, ಹರಕೆ ಕಟ್ಟಿಕೊಂಡಿದ್ದೀರಿ. ಈಗಲೂ ಅದನ್ನೇ ಮಾಡುತ್ತಿದ್ದೀರಿ ಎಂಬ ಅರಿವು ನನಗಿದೆ. ಪಕ್ಷತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ. ನೀವು ಶ್ರಮಪಡಿ, ಶ್ರಮಕ್ಕೆ ಪ್ರತಿಫಲ ಸಿಗುತ್ತೆ. ಟೀಕೆಗಳು ಸಾಯುತ್ತವೆ, ನೀವು ಮಾಡುವ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ತಿಳಿಸಿದರು.
ನನ್ನ ಬಗ್ಗೆ ಬೇರೆಯವರಿಗಿಂತ ನಮ್ಮ ಸಮುದಾಯದ ಕೆಲವರೇ, ನಮ್ಮವರೇ ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ. ಹಿಂದೆಯಿಂದ, ಮುಂದೆಯಿಂದ ಚಾಕು ಹಾಕುತ್ತಿದ್ದಾರೆ. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾವು ಪ್ರಾಮಾಣಿಕವಾಗಿ ಇರಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು. ನನಗೆ ಯಾರ ಪ್ರಮಾಣಪತ್ರವೂ ಬೇಡ. ನನ್ನ ಆತ್ಮಸಾಕ್ಷಿಯನ್ನು ನಾನು ಮೆಚ್ಚಿಸಿದರೆ ಸಾಕು. ನೀವು ನಿಮ್ಮ ಸ್ವಾಭಿಮಾನ, ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ನೀವುಗಳು ನಿಮ್ಮ ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕು. ನೀವು ಯಾವುದೇ ಉದ್ಯಮ ನಡೆಸುತ್ತಿದ್ದರೂ ನಂಬಿಕೆ ಉಳಿಸಿಕೊಳ್ಳಿ. ಆಗ ಗ್ರಾಹಕರು ನಿಮ್ಮ ಬಳಿ ಬರುತ್ತಾರೆ. ನೀವು ನಂಬಿಕೆ ಮೂಲಕ ನಿಮ್ಮ ಬ್ರಾಂಡ್ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು. ನೀವು ಬಲಿಷ್ಠವಾಗಿದ್ದರೆ ಶತ್ರುಗಳು ಜಾಸ್ತಿ. ನಿಮ್ಮ ಮೇಲೆ ಅಸೂಯೆ ಪಡುವವರು ಹೆಚ್ಚು, ಹೀಗಾಗಿ ಎಚ್ಚರಿಕೆಯಿಂದ ಇರಿ. ನಾನು ವಯಸ್ಸಿನಲ್ಲಿ ಚಿಕ್ಕವನಾದರೂ, ಅನುಭವ ದೊಡ್ಡದಾಗಿದೆ. ನಿಮ್ಮ ಪರವಾಗಿ ನಾನು ಸಹೋದರನಾಗಿ, ಸ್ನೇಹಿತನ್ನಾಗಿ ಇರುತ್ತೇನೆ. ಉದ್ಯಮಿಗಳು ಸಾಲ ತಂದು ವ್ಯಾಪಾರ ಮಾಡಿ, ಬಡ್ಡಿ ಕಟ್ಟಿ, ಉದ್ಯೋಗಿಗಳಿಗೆ ವೇತನ ನೀಡಿ, ಜಿಎಸ್ ಟಿ ಕಟ್ಟಿ ಕೊನೆಗೆ ಉಳಿಯುವುದನ್ನು ಪಡೆಯುತ್ತೀರಿ. ನೀವು ಸರ್ಕಾರಕ್ಕೂ ಸಹಾಯ ಮಾಡುತ್ತೀರಿ. ಸಮಾಜಕ್ಕೂ ಸಹಾಯ ಮಾಡುತ್ತಿದ್ದೀರಿ. ಇಷ್ಟು ಧೈರ್ಯ ಮಾಡಿ ಉದ್ಯಮಿಗಳಾಗಿ ಶ್ರಮ ವಹಿಸುತ್ತಿರುವ ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.
ನೀವೆಲ್ಲರೂ ಒಕ್ಕಲಿಗರು. ಈ ಹೆಸರೇ ನಿಮ್ಮ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ. ನೀವು ಉದ್ಯಮಿಗಳಾಗಿ ಬೆಳೆಯಲು ಮುಂದಾಗಿದ್ದೀರಿ. ಅನೇಕರು ಯಶಸ್ವಿಯಾಗಿದ್ದೀರಿ. ಯುವ ಒಕ್ಕಲಿಗ ಉದ್ಯಮಿಗಳನ್ನು ಸೇರಿಸಿ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಉದ್ಯಮಿಗಳು ಪರಸ್ಪರ ಸೇರಿದ್ದಾರೆ. ನಾನು ಇಲ್ಲಿರುವ ಉದ್ಯಮಿಗಳ ಬಗ್ಗೆ ಮಾಹಿತಿ ಪಡೆದೆ. ಅವರು ಬಹಳ ಶ್ರಮ ಪಡುತ್ತಿದ್ದಾರೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ. ನೀವು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ. ಕೊಟ್ಟರೆ ನಿಮ್ಮ ಕಥೆ ಮುಗೀತು. ನಂಬಿಕೆಗೆ ಪೆಟ್ಟು ಬೀಳದಂತೆ ಎಚ್ಚರಿಕೆ ವಹಿಸಬೇಕು. ನೀವು ಉದ್ಯೋಗಿಗಳಲ್ಲ, ಹತ್ತಾರು ಜನರಿಗೆ ಉದ್ಯೋಗ ನೀಡುವವರು. ಹೀಗಾಗಿ ನನ್ನ ಅನುಭವದ ಸಲಹೆ ನೀಡುತ್ತಿದ್ದೇನೆ ಎಂದು ಹೇಳಿದರು.
“ಬಂಗಾರಪ್ಪ ಅವರ ಕಾಲದಲ್ಲಿ ನಾನು ಜೈಲು ಮಂತ್ರಿಯಾಗಿದ್ದಾಗ ನಾಗರತ್ನಮ್ಮ ಸ್ಪೀಕರ್ ಆಗಿದ್ದರು. ಅವರು ಒಮ್ಮೆ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ನೀನು ಜೈಲಿಗೆ ಹೋಗಿ ಬಾ. ಅಲ್ಲಿರುವವರು ಯಾಕೆ ಜೈಲಿಗೆ ಹೋಗಿದ್ದಾರೆ ಎಂದು ತಿಳಿದುಕೊಂಡು ಬಂದು ಹೇಳು ಎಂದರು. ನಾನು ಜೈಲಿಗೆ ಹೋದೆ, ಅಲ್ಲಿದವರು ಒಬ್ಬ ಹಣ ಕಳ್ಳತನಕ್ಕೆ, ಮತ್ತೊಬ್ಬ ಹೆಣ್ಣಿನ ವಿಚಾರಕ್ಕೆ, ಮತ್ತೊಬ್ಬ ಆಸ್ತಿಗಾಗಿ ದಾಯಾದಿ ಜೊತೆ ಜಗಳವಾಡಿ ಬಂದಿದ್ದ. ಅದೇ ರೀತಿ ನಿಮಗೆ ಯಾರಾದರೂ ತೊಂದರೆ ಕೊಡುವವರು, ಮೋಸ ಮಾಡುವವರು ಇದ್ದರೆ, ಅವರು ನಿಮ್ಮ ಅಕ್ಕಪಕ್ಕದಲ್ಲಿ ಇರುವವರೇ ಆಗಿರುತ್ತಾರೆ. ಬೇರೆಯವರು ತೊಂದರೆ ಕೊಡಲ್ಲ. ನೀವು ಜಾಗರೂಕರಾಗಿ ಇರಬೇಕು” ಎಂದು ತಿಳಿಸಿದರು.
ನಾವು ಮಂಗಳೂರಿನಲ್ಲಿ ಹೊಸ ಪ್ರಯೋಗಕ್ಕೆ ಹೊಸ ಹೆಜ್ಜೆ ಇಟ್ಟಿದ್ದೇವೆ. ಕರಾವಳಿ ಭಾಗದಲ್ಲಿ ಗಲಾಟೆ, ಘರ್ಷಣೆ ಹೆಚ್ಚಾಗಿ ಸಂಜೆ ಮೇಲೆ ಅಂಗಡಿ ಬಾಗಿಲು ಹಾಕಿಕೊಂಡು ವ್ಯಾಪಾರ ವಹಿವಾಟು ಇಲ್ಲವಾಗಿದೆ. ನಮ್ಮ ರಾಜ್ಯದಲ್ಲಿರುವ 300 ಕಿ.ಮಿ ಸಮುದ್ರತೀರ ಪರಿಸರ, ದೇವಾಲಯ, ಸೌಂದರ್ಯ ಪ್ರಪಂಚಕ್ಕೆ ಪರಿಚಯಿಸಲು ಮುಂದಾಗಿದ್ದೇವೆ. ಈ ಭಾಗದಲ್ಲಿ ಒಂದೇ ಒಂದು ಪಂಚತಾರ ಹೋಟೆಲ್ ಇಲ್ಲ. ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಲು ನಿನ್ನೆ ಚರ್ಚೆ ಮಾಡಿದ್ದೇವೆ ಎಂದರು.


