ಬೆಂಗಳೂರು: ಕಂತು ಪಾವತಿಸಲು ತೆಗೆದಿಟ್ಟಿದ್ದ 200 ರೂ. ಗಂಡ ತೆಗೆದುಕೊಂಡ ವಿಷಯದಲ್ಲಿ ದಂಪತಿ ನಡುವೆ ಜಗಳವಾಗಿದ್ದು, ನಂತರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಎರಡು ಮಕ್ಕಳ ತಾಯಿ ಸುಮಾ (30) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
8 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಮದುವೆ ಆಗಿದ್ದ ಸುಮಾ ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಕಟ್ಟಲೆಂದು ಸುಮಾ ಗಂಡನಿಗೆ ಕಾಣದಂತೆ 1,300 ರೂ. ಮನೆಯಲ್ಲಿಟ್ಟಿದ್ದರು.
ಕೂಡಿಟ್ಟಿದ್ದ 1,300 ರೂ. ಪೈಕಿ ಚಂದ್ರಶೇಖರ್ ಸಬೂಬು ಹೇಳಿ 200 ರೂ. ಸ್ವಂತ ಖರ್ಚಿಗೆ ಬಳಸಿದ್ದ. ಆದರೆ ಹಣ ವಾಪಸ್ ಕೊಡದ ಕಾರಣ ಶುಕ್ರವಾರ ಬೆಳಗ್ಗೆ ಇಬ್ಬರ ನಡುವೆ ಗಲಾಟೆ ನಡೆದಿದೆ.
ಜಗಳ ನಡೆದ ನಂತರ ಪತಿ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದ ವೇಳೆ ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಊಟಕ್ಕೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.


