ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಗಳೂರು ಇನ್ನು ಮುಂದೆ ತವರು ಆಗಿರುವುದಿಲ್ಲ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇನ್ನು ಬೆಂಗಳೂರಿನಲ್ಲಿ ಆಡುವುದಿಲ್ಲ!
ಹೌದು, ಬೆಂಗಳೂರಿನಲ್ಲಿ ಕಳೆದ ವರ್ಷ ಆರ್ ಸಿಬಿ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಅಪಪ್ರಚಾರದಿಂದ ನೊಂದಿರುವ ಆರ್ ಸಿಬಿ ಬೆಂಗಳೂರಿನಲ್ಲಿ ಇನ್ಜು ಮುಂದೆ ಆಡಲು ಆಸಕ್ತಿ ತೋರುತ್ತಿಲ್ಲ.
ಐಪಿಎಲ್ 2026 ಟೂರ್ನಿಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಬಗ್ಗೆ ಆರ್ ಸಿಬಿ ಇದುವರೆಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿಲ್ಲ. ಕೆಎಸ್ ಸಿಎ ಐಪಿಎಲ್ ಪಂದ್ಯ ಉಳಿಸಿಕೊಳ್ಳಲು ಹೋರಾಟಕ್ಕೆ ಬೆಂಗಳೂರು ಪೊಲೀಸರಿಂದ ಸೂಕ್ತ ಪ್ರತಿಕ್ರಿಯೆಯೂ ಲಭಿಸುತ್ತಿಲ್ಲ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆರ್ ಸಿಬಿ ಹೊಸ ತವರಿನ ಹುಡುಕಾಟದಲ್ಲಿದ್ದು, ಎರಡು ಮೈದಾನಗಳನ್ನು ಅಂತಿಮಗೊಳಿಸಿದೆ.
ಛತ್ತೀಸಗಢದ ರಾಯ್ ಪುರವನ್ನು ತವರು ಪಂದ್ಯಗಳಿಗಾಗಿ ಆರ್ ಸಿಬಿ ಬಹುತೇಕ ಅಂತಿಮಗೊಳಿಸಿದ್ದು, ಮಧ್ಯಪ್ರದೇಶದ ಇಂದೋರ್ ಅನ್ನು ಎರಡನೇ ಆಯ್ಕೆಯಾಗಿ ಉಳಿಸಿಕೊಂಡಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಬೇಕಾಗಿದೆ.
ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ತವರು ಪಂದ್ಯಗಳನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಪುಣೆಯಲ್ಲಿ ಆಯೋಜಿಸುತ್ತಿದೆ. ರಾಜಸ್ಥಾನ್ ಕ್ರಿಕೆಟ್ ಸಂಸ್ಥೆ ಜೊತೆಗಿನ ಅಸಮಾಧಾನದ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ಕೂಡ ತವರಿನ ಪಂದ್ಯಗಳನ್ನು ಬೇರೆಗೆ ವರ್ಗಾಯಿಸಿಕೊಳ್ಳಲು ಪ್ರಯತ್ನ ನಡೆಸಿದೆ.
ಮಾರ್ಚ್ 21ರಿಂದ ಐಪಿಎಲ್ 2026 ಆರಂಭಗೊಳ್ಳುವ ಸಾಧ್ಯತೆ ಇದ್ದು, ಪಂದ್ಯಗಳ ವೇಳಾಪಟ್ಟಿ ಹಾಗೂ ಸ್ಥಳಗಳ ನಿಯೋಜನೆ ಇನ್ನೂ ಅಂತಿಮಗೊಂಡಿಲ್ಲ.


