ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಶಸ್ವಿನಿ (23) ಮೃತ ವಿದ್ಯಾರ್ಥಿನಿ. ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಆರೋಪ ಕೇಳಿಬಂದಿದೆ. ಮೃತ ವಿದ್ಯಾರ್ಥಿನಿಯ ಸ್ನೇಹಿತರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.
ಪರಿಮಳ-ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ ಬೊಮ್ಮನಹಳ್ಳಿಯ ಪ್ರತಿಷ್ಠಿತ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಸೆಮಿನಾರ್ಗೆ ಅವಕಾಶ ನೀಡದೆ, ರೇಡಿಯಾಲಜಿ ಕೇಸ್ ಕೂಡ ನೀಡದೆ ಕಾಲೇಜಿನಲ್ಲಿ ಈಕೆಗೆ ಕಿರುಕುಳ ನೀಡಲಾಗಿದೆ. ಇತ್ತೀಚೆಗೆ ಕಣ್ಣು ನೋವಿನ ಕಾರಣಕ್ಕೆ ಆಕೆ ಕಾಲೇಜಿಗೆ ಹೋಗಿರಲಿಲ್ಲ. ಮರು ದಿನ ಕಾಲೇಜಿಗೆ ಬಂದಾಗ ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ, ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ, ಪೂರ್ತಿ ಬಾಟಲ್ ಹಾಕಿಕೊಂಡ್ಯಾ ಎಂದೆಲ್ಲ ಕೇಳಿ ಪ್ರಾಧ್ಯಾಪಕರು ಅವಮಾನ ಮಾಡಿದ್ದರು. ಇದರಿಂದ ನೊಂದಿದ್ದ ಆಕೆ ಪ್ರಾಣಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾಳೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇರುವ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರು ಕಿರುಕುಳ ನೀಡಿದ ಪ್ರಾಂಶುಪಾಲ ಮತ್ತು ಅವಮಾನಿಸಿದ ಪ್ರಾಧ್ಯಾಪಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗುರುವಾರವಷ್ಟೇ ವೈದ್ಯಕೀಯ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಸರ್ಕಾರಿ ಮೆಡಿಕಲ್ ಕಾಲೇಜ್ (ಸಿಮ್ಸ್) ಹಾಸ್ಟೆಲ್ ಕೊಠಡಿಯಲ್ಲಿ ನಡೆದಿದೆ. ಮೆಡಿಕಲ್ ಕಾಲೇಜ್ ನಲ್ಲಿ ಎಂಡಿ ರೇಡಿಯಾಲಜಿ ಅಭ್ಯಾಸ ಮಾಡುತ್ತಿದ್ದ ಮಧುಗಿರಿ ಮೂಲದ ಸಂದೀಪ್ ರಾಜ್ (28) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ .


