ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಸಿಎಂ ಅನುಮತಿ ಪಡೆದು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ, ಘಟನೆಯ ಕುರಿತು ಸಿಐಡಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು.ಆನಂತರ ಸರ್ಕಾರ ಯಾರು ತಪ್ಪಿತಸ್ಥರು, ಘಟನೆಯಲ್ಲಿ ಯಾರ ನಿರ್ಲಕ್ಷ್ಯ ಇದೆ ಎಲ್ಲವನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಮಹಿಳೆ ವಿವಸ್ತ್ರ ಆಗುವುದಕ್ಕೆ ಪೊಲೀಸರು ಬಿಟ್ಟಿಲ್ಲ, ಕೂಡಲೇ ಕ್ರಮ ವಹಿಸಿದ್ದಾರೆ. ಪೊಲೀಸರು ವಿವಸ್ತ್ರಗೊಳಿಸಿಲ್ಲ, ಆಕೆಯೇ ಮಾಡಿಕೊಂಡಿದ್ದು ಎಂಬ ಮಾಹಿತಿಯನ್ನು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನೂ ಸ್ಪಷ್ಟವಾಗಿ ಗೊತ್ತಾಗಬೇಕಾದರೆ ತನಿಖೆಯಾಗಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಹೇಳುವ ಪ್ರಕಾರ ಹೆಚ್ಚಿನ ಅಧಿಕಾರ ಇಲ್ಲ ಎಂಬುದು ಸಂವಿಧಾನಾತ್ಮಕವಾಗಿ ಸರಿ ಇರಬಹುದು. ಸರ್ಕಾರದ ಪ್ರತಿನಿಧಿಯಾಗಿ ಡಿಕೆ ಶಿವಕುಮಾರ್ ಅಲ್ಲಿಗೆ ಹೋಗಿರುವುದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ನಾನು ಹೋಗುವುದಕ್ಕೆ ಆಗಿಲ್ಲ. ಆ ಜವಾಬ್ದಾರಿಯಿಂದ ಅವರು ಹೋಗಿದ್ದಾರೆ. ನಾವು ಭೇಟಿ ನೀಡುವಾಗ ಯೋಚನೆ ಮಾಡಿ ತನಿಖೆಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ವಿಳಂಬ ಮಾಡುತ್ತೇವೆ. ಅದೇ ಕಾರಣದಿಂದ ಇದುವರೆಗೂ ಬಳ್ಳಾರಿಗೆ ಹೋಗಿಲ್ಲ ಎಂದರು.
ಉಪಮುಖ್ಯಮಂತ್ರಿ ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದಾರೆ. ಮೃತ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಲು ಯಾರ ಅನುಮತಿ ಬೇಕು ಎಂದು ಪ್ರಶ್ನಿಸಿದರು.
ಬಳ್ಳಾರಿ ವಲಯ ಐಜಿಪಿ ವರ್ಗಾವಣೆ ವಿಚಾರ ನನಗೆ ಗೊತ್ತಿದೆ, ವರ್ಗಾವಣೆಯನ್ನು ಡಿಪಿಎಆರ್‌ನವರು ಮಾಡುತ್ತಾರೆ. ಕಡತಕ್ಕೆ ಸಹಿ ಹಾಕಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವವರು ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಬಟ್ಟೆ ಬಿಚ್ಚಿ ಥಳಿಸಲಾಗಿರುವ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವುದು, ಮಹಿಳೆಯರ ಘನತೆಯನ್ನು ರಕ್ಷಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಪೊಲೀಸ್ ಬಂಧನದ ಸಮಯದಲ್ಲಿ ಮಹಿಳೆಯೊಬ್ಬರು ಅತ್ಯಂತ ಸಂಕಷ್ಟದ ಮತ್ತು ಅವಮಾನಕರ ಸ್ಥಿತಿಯಲ್ಲಿರುವ ದೃಶ್ಯಗಳು ಹೊರಬಂದಾಗ, ಒಂದು ಜವಾಬ್ದಾರಿಯುತ ಸರ್ಕಾರ ಸಂವೇದನಾಶೀಲತೆಯಿಂದ ಪಾರದರ್ಶಕವಾಗಿ ನ್ಯಾಯವನ್ನು ಒದಗಿಸುವ ಮಾಡಬೇಕಿತ್ತು. ಆದರೆ ಲಜೆಗೆಟ್ಟ ಕಾಂಗ್ರೆಸ್ ಸರ್ಕಾರ ಮಾಡಿದ್ದು, ನಿರಾಕರಣೆ ಮತ್ತು ಸಾರ್ವಜನಿಕ ಆಕ್ರೋಶವನ್ನು ಲಘುವಾಗಿ ಕಾಣುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ್ದಾರೆ.


