ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮ್ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಬಾಯ್ಲರ್ ಸ್ಫೋಟಗೊಂಡು ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ.
ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಘಟನೆಗೆ ಸ್ಪಂದಿಸದ ಸರ್ಕಾರ ಹಾಗೂ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ಗೊಡಚಿನಮಲ್ಕಿ ಗ್ರಾಮದ ನಿವಾಸಿ ಭರತೇಶ ಸಾರವಾಡಿ, ಅಥಣಿ ನಿವಾಸಿ ಮಂಜುನಾಥ್ ತೇರದಾಳ, ಬಾಗಲಕೋಟಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್ ಮೃತಪಟ್ಟವರು.
ವಿಕ್ರಮ ಇನಾಮದಾರ್ ಎಂಬವರಿಗೆ ಸೇರಿದ ಈ ಕಾರ್ಖಾನೆಯ ವಾಲ್ ದುರಸ್ತಿ ಮಾಡುವಾಗ ವಾಲ್ ಸ್ಫೋಟಗೊಂಡು ಕುದಿಯುವ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದಿತ್ತು. ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ಕಾರ್ಮಿಕರ ಕುಟುಂಬಸ್ಥರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಸ್ಪಂದಿಸುತ್ತಿಲ್ಲ, ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಸಂತ್ರಸ್ತರಾದವರ ಹುದ್ದೆಗೆ ತಕ್ಕಂತೆ ಪರಿಹಾರ ನೀಡಬೇಕು. ಪರಿಹಾರ ಘೋಷಣೆ ಆಗುವವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.


