ವೈದ್ಯಕೀಯ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಸರ್ಕಾರಿ ಮೆಡಿಕಲ್ ಕಾಲೇಜ್ (ಸಿಮ್ಸ್) ಹಾಸ್ಟೆಲ್ ಕೊಠಡಿಯಲ್ಲಿ ನಡೆದಿದೆ. ಮೆಡಿಕಲ್ ಕಾಲೇಜ್ ನಲ್ಲಿ ಎಂಡಿ ರೇಡಿಯಾಲಜಿ ಅಭ್ಯಾಸ ಮಾಡುತ್ತಿದ್ದ ಮಧುಗಿರಿ ಮೂಲದ ಸಂದೀಪ್ ರಾಜ್ (28) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ .
ಕಾಲೇಜ್ ನ ಭದ್ರಾ ವಸತಿ ಗೃಹದ 3 ನೇ ಮಹಡಿ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್ ನೋಟ್ ಬರೆದಿಟ್ಟಿದ್ದಾರೆ. ನಿನ್ನೆ ಸಂಜೆ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಸಂದೀಪ್ ರಾಜ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಮಾನಸಿಕ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಚಿಕಿತ್ಸೆ ಕೂಡ ಪಡೆದುಕೊಂಡಿದ್ದರು ಎನ್ನಲಾಗಿದೆ. ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲಿಸಿದ್ದಾರೆ.
ಬಸ್ ನ ಟಯರ್ ಬ್ಲಾಸ್ಟ್ ಆಗಿ ಬೈಕ್ ಸವಾರ ಸಾವು
ಚಲಿಸುತ್ತಿರುವ ಖಾಸಗಿ ಬಸ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ಬಸ್ ನ ಪಕ್ಕದಲ್ಲಿ ಚಲಿಸುತ್ತಿದ್ದ ಬೈಕ್ ಸವಾರನ ತಲೆಗೆ ಬಸ್ ನ ಕಬ್ಬಿಣದ ವಸ್ತು ತಗುಲಿ ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಬಿಆರ್ ಪಿಯ ಹೆಚ್ ಕೆ ಜಂಕ್ಷನ್ ನಲ್ಲಿ ನಡೆದಿದೆ.
ಭದ್ರಾವತಿಯ ಕಣಗಲಸರದಿಂದ ರಂಗೇನಹಳ್ಳಿ ಆಸ್ಪತ್ರೆಗೆ ಕೂಲಿ ಮಹಿಳೆಯನ್ನ ಬೈಕ್ ನಲ್ಲಿ ಕರೆದುಕೊಂಡು ಬೀರು (42) ಎಂಬುವರು ಹೋಗುತ್ತಿದ್ದರು. ಬೀರು ಅವರು ಹೆಚ್ ಕೆ ಜಂಕ್ಷನ್ ನ ಅಂಗಳ ಪರಮೇಶ್ವರಿ ದೇವಸ್ಥಾನದ ಬಳಿ ಬರುವಾಗ ಈ ದುರಂತ ಸಂಭವಿಸಿದೆ.
ಬೈಕ್ ನಿಂದ ಮುಂದೆ ಹೋಗುತ್ತಿದ್ದಂತೆ ಬಸ್ ನ ಟಯರ್ ಬ್ಲಾಸ್ಟ್ ಆಗಿದೆ. ಚಲಿಸುತ್ತಿದ್ದ ಬಸ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ಕಬ್ಬಿಣದ ಚೂರೊಂದು ಬೈಕ್ ನಲ್ಲಿ ಚಲಿಸುತ್ತಿದ್ದ ಬೀರುವಿನ ತಲೆಗೆ ಹೊಡೆತಬಿದ್ದಿದೆ. ಬೈಕ್ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳೆ ಮತ್ತು ಬೀರು ಕೆಳಕ್ಕೆ ಬಿದ್ದಿದ್ದಾರೆ.
ಅವರನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿತ್ರತು, ಮೆಗ್ಗಾನ್ ನಲ್ಲಿ ಲಕ್ಷ್ಮೀ ಚಿಕಿತ್ಸೆ ಪಡೆದಿದ್ದಾರೆ. ಬೀರು ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.


