Menu

ಶಾಸನ ಕರ್ತರ ಆಯ್ಕೆ ಮತದಾರರ ವಿವೇಕದ ಪ್ರತಿಬಿಂಬ

ಎಲ್ಲಿಯವರೆಗೂ ಮತದಾರ ತಾನು ನೀಡುವ ಮತದ ಮೌಲ್ಯದ ಸದಾಶಯಗಳ ಬಗ್ಗೆ ಆಲೋಚಿಸುವುದಿಲ್ಲವೋ ಅಲ್ಲಿಯವರೆಗೂ ಕೆಟ್ಟ ಮತ್ತು ದುಷ್ಟ ಪರಂಪರೆಯುಳ್ಳ ವ್ಯಕ್ತಿಗಳು ಶಾಸನಸಭೆಯನ್ನು ಪ್ರವೇಶಿಸುವುದನ್ನು ತಪ್ಪಿಸಲೂ ಸಾಧ್ಯವಾಗುವುದಿಲ್ಲ!

ಶಾಸನಕರ್ತರೇ ದುಶ್ಯಾಸನರಾದರೆ?

ಕಾನೂನು ರಚನೆಕಾರರೇ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರೇ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುವುದಿಲ್ಲವೇ? ರಾಜ್ಯದ ಮೂರು, ನಾಲ್ಕು ಕಡೆ ಕಳೆದ ಒಂದು ವಾರದಲ್ಲಿ ನಡೆದ ಕೆಲ ಘಟನೆಗಳು ಪ್ರಜಾತಂತ್ರ ವ್ಯವಸ್ಥೆಯನ್ನು ನಾಚಿಸುವಂತಿವೆ. ಅಥಣಿ, ಬಳ್ಳಾರಿ ಮತ್ತು ಬೀದರ್‌ನಲ್ಲಿ ಈ ನಾಡಿನ ಜನಪ್ರತಿನಿಧಿಗಳು, ತಮ್ಮ ವೈಯಕ್ತಿಕ ಪ್ರತಿಷ್ಠೆಗಳ ಹಿನ್ನೆಲೆಯಲ್ಲಿ ರಂಪಾಟ ಮತ್ತು ಮುಷ್ಟಿಯುದ್ಧಕ್ಕೆ ನಿಂತಿದ್ದು ನಾಚಿಕೆಗೇಡು ಮತ್ತು ಖಂಡನೀಯ. ಇವರ ಬಾಲಿಶ ವರ್ತನೆಯನ್ನು ಕಂಡು ಇಂದು ನಾಡಿನ ಜನತೆ ತಲೆತಗ್ಗಿಸುವಂತಾಗಿದೆ. ನಾಡಿನ ಜನತೆಗೆ ಪ್ರಜಾತಂತ್ರದ ಮೌಲ್ಯಗಳನ್ನು ಸಾರಿ ಹೇಳಬೇಕಿರುವ ಮತ್ತು ಈ ನಾಡಿಗೆ ಅಗತ್ಯವಿರುವ ಪೂರಕ ಶಾಸನಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಬೇಕಿರುವ ಜನಪ್ರತಿನಿಧಿ ಗಳು ಇಂದು ತಮ್ಮ ತಮ್ಮ ಕೊರಳುಪಟ್ಟಿ ಹಿಡಿದುಕೊಂಡು ಬಡಿದಾಡುವುದು ನೋಡಿದಾಗ ಭಾರತದ ಪ್ರಜಾತಂತ್ರವಿಂದು ಎತ್ತ ಸಾಗಿದೆ ಎಂದು ಭಯ ಮತ್ತು ಆತಂಕ ಈ ದೇಶದ ಜನತೆಯಲ್ಲಿ ತಲೆದೋರಿದೆ.

ಪ್ರಜಾತಂತ್ರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಅಗತ್ಯವಾದರೂ ಏನೆಂಬ ಪ್ರಾಥಮಿಕ ಅರ್ಥವೂ ಗೊತ್ತಿರದ ವ್ಯಕ್ತಿಗಳಿಂದು ಶಾಸನಸಭೆಗಳಿಗೆ ಚುನಾಯಿತರಾಗುತ್ತಿರುವುದು ಒಂದು ದುರಂತ. ತಮ್ಮ ಹಣಬಲ ಮತ್ತು ತೋಳ್ಬಲದಿಂದ ಜನತೆಯ ಮತಗಳನ್ನು ಖರೀದಿಸಿ ಚುನಾವಣೆಗಳಲ್ಲಿ ಗೆದ್ದು ಬೀಗುವ ಇವರಿಗೆ ಪ್ರಜಾತಂತ್ರದ ಮೂಲವೇ ಗೊತ್ತಿಲ್ಲ. ಇಂತಹ ಜನಪ್ರತಿನಿಧಿಗಳ ಬಗ್ಗೆ ಜನತೆಗೂ ಅರಿವು ಮತ್ತು ಪ್ರಜ್ಞೆ ಅತಿ ಮುಖ್ಯ ಶಾಸನಸಭೆಗಳಿಗೆ ತಾವು ಆರಿಸಿ ಕಳುಹಿಸುವ ವ್ಯಕ್ತಿಗಳ ಚರಿತ್ರೆ ಮತ್ತು ಹಿನ್ನೆಲೆಯನ್ನು ಈ ಜನತೆ ಅರಿತು ಚುನಾವಣೆಗಳಲ್ಲಿ ಮತ ಚಲಾಯಿಸದಿದ್ದಲ್ಲಿ ಮುಂದೊಂದು ದಿನ ಈ ದೇಶದಿಂದ ಪ್ರಜಾತಂತ್ರವೇ ದೂರವಾಗಿ ಸರ್ವಾಧಿಕಾರಿಗಳ ಸಾಮ್ರಾಜ್ಯವಾಗುವ ಕಾಲ ದೂರವಿಲ್ಲ.

ಬ್ರಿಟಿಷರು ಮತ್ತು ಮೊಘಲರ ಆಡಳಿತದಿಂದ ತಮ್ಮತನವನ್ನೇ ಕಳೆದುಕೊಂಡಿದ್ದ ಭಾರತವು ೧೯೪೭ರಲ್ಲಿ ಗಳಿಸಿದ ಸ್ವಾತಂತ್ರ್ಯದ ಮೌಲ್ಯಗಳ ಬಗ್ಗೆಯೇ ನಮಗಿಂದು ಅರಿವು ಮೂಡದಿರುವುದು ಒಂದು ದುರಂತ. ಇಂತಹ ಅರಿವು ಮೂಡಿಸುವುದು ಸರ್ಕಾರಗಳ ಮತ್ತು ಶಾಸನಸಭೆಗಳ ಪ್ರಥಮ ಹೊಣೆ. ಆದರೆ ಸರ್ಕಾರ ಮತ್ತು ಶಾಸನಸಭೆಗಳಲ್ಲಿ ಕುಳಿತು ಪ್ರಜಾತಂತ್ರದ ಹಿತಾಸಕ್ತಿಯನ್ನು ಕಾಪಾಡಬೇಕಿರುವ ವ್ಯಕ್ತಿಗಳೇ ಮೈ ಮರೆತು ಬೀದಿಗಿಳಿದರೆ ಪ್ರಜಾತಂತ್ರದ ಮೂಲ ಆಶಯಗಳಿಗೆ ಬೆಲೆ ಎಲ್ಲಿ? ಮಹಾತ್ಮಾ ಗಾಂಧಿ ಜನಿಸಿದ ಈ ದೇಶದಲ್ಲಿ ಅನ್ಯಾಯ ಮತು ಅಕ್ರಮಗಳನ್ನು ಪ್ರತಿಭಟಿಸಲು ಅವರು ನೀಡಿದ ಮೌನ ಪ್ರತಿಭಟನೆ, ಧರಣಿ ಮತ್ತು ಸಭಾತ್ಯಾಗದಂತಹ ಅಸ್ತ್ರಗಳು ಇಂದು ಕಾಲಕಸವಾಗಿ ಹೋಗಿವೆ. ಪ್ರಜಾತಂತ್ರದಲ್ಲಿ ಇವುಗಳಿಗೂ ಅದೆಂತಹ ಶಕ್ತಿ ಇದೆ ಮತ್ತು ಸಾರ್ವಜನಿಕ ಬದುಕಿನಲ್ಲಿರುವ ಶಾಸಕರು ಮತ್ತು ಸಂಸದರು ಇದನ್ನು ಬಳಸಲು ಅವಕಾಶ ಇದ್ದರೂ ತಾವು ತಮ್ಮ ಸಹಚರರೊಂದಿಗೆ ಮಾರಕಾಸ್ತ್ರಗಳೊಂದಿಗೆ ಮೆರವಣಿಗೆ ಹೊರಟು ಬೀದಿಯಲ್ಲಿ ಕಾಲು ಕೆರೆದು ಜಗಳಕ್ಕೆ ನಿಲ್ಲುವುದು ಅಕ್ಷಮ್ಯ. ಎಲ್ಲಿಯವರೆಗೂ ಮತದಾರ ತಾನು ನೀಡುವ ಮತದ ಮೌಲ್ಯದ ಸದಾಶಯಗಳ ಬಗ್ಗೆ ಆಲೋಚಿಸುವುದಿಲ್ಲವೋ ಅಲ್ಲಿಯವರೆಗೂ ಕೆಟ್ಟ ಮತ್ತು ದುಷ್ಟ ಪರಂಪರೆಯುಳ್ಳ ವ್ಯಕ್ತಿಗಳು ಶಾಸನಸಭೆಯನ್ನು ಪ್ರವೇಶಿಸುವುದನ್ನು ತಪ್ಪಿಸಲೂ ಸಾಧ್ಯವಾಗುವುದಿಲ್ಲ.

Related Posts

Leave a Reply

Your email address will not be published. Required fields are marked *