ಬೆಂಗಳೂರಿನ ಸದಾಶಿವನಗರದ ನಿವಾಸಿಯೊಬ್ಬರ ಮನೆಯಲ್ಲಿ ನಾಲ್ಕು ವರ್ಷಗಳಿಂದ ಕೆಲಸಕ್ಕಿದ್ದ ಮಹಿಳೆ ಮತ್ತು ಆಕೆಯ ಪತಿ ಸೇರಿ 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಸದಾಶಿವನಗರದ ನಿವಾಸಿ ಅಭಿಷೇಕ್ ಅವರ ಮನೆಯಲ್ಲಿ ಪಶ್ಚಿಮ ಬಂಗಾಳದ ಹಾಜೀರಾ ಬೇಗಂ ಎಂಬಾಕೆ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. 2024 ರಲ್ಲಿ ಕೆಲಸ ಬಿಟ್ಟಿದ್ದಳು. ಕಳೆದ ಡಿಸೆಂಬರ್ 27 ರಂದು ಮತ್ತೆ ಕೆಲಸಕ್ಕೆ ಬಂದಿದ್ದಳು. ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪತಿ ಶಬ್ಬೀರ್ ಎಂಬಾತನನ್ನು ಕರೆತಂದಿದ್ದಳು. ದಂಪತಿ ಅಭಿಷೇಕ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಡಿಸೆಂಬರ್ 30 ರಂದು ಮನೆ ಮಾಲೀಕ ಅಭಿಷೇಕ್ ಕುಟುಂಬದವರ ಜೊತೆ ತಮಿಳುನಾಡು ಪ್ರವಾಸಕ್ಕೆ ತೆರಳಿದ್ದರು. ಆಗ ಹಾಜೀರಾ ಮತ್ತು ಶಬ್ಬೀರ್ ಮನೆಯಲ್ಲಿದ್ದ ಕೀಗಳನ್ನು ಬಳಸಿಕೊಂಡು ಲಾಕರ್ ತೆರೆದು 900 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ. ಡಿಸೆಂಬರ್ 31 ರಂದು ಪ್ರವಾಸ ಮುಗಿಸಿ ಅಭಿಷೇಕ್ ಕುಟುಂಬ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಕಂಡು ಬಂದಿದೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ಪಶ್ಚಿಮ ಬಂಗಾಳ ಮೂಲದ ದಂಪತಿಯನ್ನು ಬಂಧಿಸಿ ಒಟ್ಟು 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಭಾರತ ಅಥವಾ ಹೊರ ರಾಜ್ಯದ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಪರಿಶೀಲನೆ ಅತ್ಯಗತ್ಯ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


