ದಾವಣಗೆರೆಯ ಶಿರಮಗೊಂಡನಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಬೈಕ್ ಸವಾರ ಮಂಜುನಾಥ (27) ಮೃತಪಟ್ಟ ಯುವಕ. ಗದಗ ಶಿಂಗ್ಲಿ ಗ್ರಾಮದ ಮಂಜುನಾಥ ಬೈಕ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮಂಜುನಾಥ ಸ್ಥಳದಲ್ಲೇ ಅಸು ನೀಗಿದ್ದು, ಸ್ಥಳಕ್ಕೆ ಸಂಚಾರಿ ಸಿಪಿಐ ಮಂಜುನಾಥ್ ಹಾಗೂ ದಕ್ಷಿಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಹೊತ್ತಿಕೊಂಡು ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು
ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಮಣ್ಯ ಬಡಾವಣೆಯಲ್ಲಿ ಉಸಿರುಗಟ್ಟಿ ಮಹಿಳಾ ಟೆಕ್ಕಿ ಮೃತಪಟ್ಟಿರುವ ಘಟನೆಯೊಂದು ಮೂರು ದಿನಗಳ ಹಿಂದೆ ನಡೆದಿದೆ. ಶರ್ಮಿಳಾ (34) ಮೃತ ಮಹಿಳೆ, ಆಕೆ ಮಂಗಳೂರಿನವರು.
ಒಂದು ವರ್ಷದಿಂದ ಅಕ್ಸೆಂಚರ್ ಸಾಫ್ಟ್ ವೇರ್ ಕಂಪನಿಯಲ್ಲಿ ಎಂಜಿನಿಯರ್ ಕೆಲಸ ಮಾಡ್ತಿದ್ದರು. ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ರೂಮ್‌ವೊಂದರಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿದೆ. ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶರ್ಮಿಳಾ ಮನೆ ಬಳಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಮನೆಯ ಡೋರ್ ಒಡೆದು ಒಳಗೆ ಹೋಗಿದ್ದಾರೆ. ರೂಮ್ ಹಾಗೂ ಹಾಲ್ ನಲ್ಲಿ ಹೊಗೆ ತುಂಬಿಕೊಂಡಿತ್ತು. ಶರ್ಮಿಳಾ ಪ್ರಜ್ಞೆ ತಪ್ಪಿ ಬಿದಿದ್ದು ಕಂಡು ಬಂದಿತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಶರ್ಮಿಳಾರನ್ನು ದಾಖಲಿಸಿದ್ದು, ತಪಾಸಣೆ ನಡೆಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದರು.
ಬೆಂಕಿ ಹೊತತಿಕೊಂಡಾಗ ರೂಮಿನಿಂದ ಹೊರ ಬರಲಾಗದೇ ಉಸಿರುಗಟ್ಟಿ ಟೆಕ್ಕಿ ಶರ್ಮಿಳಾ ಅಸು ನೀಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸೋಕೋ ಟೀಮ್, ಎಫ್‌ಎಸ್‌ಎಲ್ ತಂಡ ಭೇಟಿ ಪರಿಶೀಲನೆ ಮಾಡಿದೆ. ನಿಖರ ಕಾರಣ ತಿಳಿಯಲು ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


