ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಜಿಯಲ್ಲಿ ವಾಸವಾಗಿದ್ದ ಯುವತಿಗೆ ಆನ್‌ಲೈನ್ ಮೂಲಕ ಭವಿಷ್ಯ ಹೇಳುವುದಾಗಿ ಗುರೂಜಿ ಸೋಗಿನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ 2.05 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಆಡುಗೋಡಿ ನಿವಾಸಿಯಾಗಿರುವ ಯುವತಿ ಚಂದ್ರಶೇಖರ್ ಸುಗತ್ ಗುರೂಜಿ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ‘ಕಷ್ಟಕ್ಕೆ ಪರಿಹಾರ’ ಎಂದು ಪ್ರಕಟವಾಗಿದ್ದ ಜಾಹೀರಾತು ಗಮನಿಸಿದ ಯುವತಿ ತನಗೆ ಮದುವೆ ಆಗುತ್ತದೆಯೇ ಎನ್ನುವುದರ ಬಗ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮದುವೆ ಆಗುತ್ತದೆ. ಆದರೆ ಅದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ಗುರೂಜಿ ಹೇಳಿದ್ದ.
ಒಪ್ಪಿಕೊಂಡ ಯುವತಿ ಆತ ನೀಡಿದ್ದ ಸೂಚನೆಯಂತೆ ಆನ್‌ಲೈನ್ ಮೂಲಕ ಕಳೆದ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ 2.05 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಮದುವೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಯುವತಿ ಹಣ ವಾಪಸ್ ಕೇಳಿದ್ದಾರೆ. ಅದಕ್ಕೆ ಹಣ ನೀಡುವುದಿಲ್ಲ, ಏನು ಮಾಡುತ್ತಿಯೋ ಮಾಡಿಕೋ ಎಂದು ಗುರೂಜಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರೀತಿಸಿದ ಹುಡುಗನನ್ನು ವಶೀಕರಣ ಮಾಡಿಸುವಂತೆ ಯುವತಿ ಸ್ವಯಘೋಷಿತ ಗುರೂಜಿಯಲ್ಲಿ ಕೇಳಿದ್ದಳು. ಅದಕ್ಕೆ ವಶೀಕರಣ ಪೂಜೆ, ವಿಶೇಷ ಹೋಮ, ಶಕ್ತಿವಂತ ಮಂತ್ರ ಜಪ ಎಂದು ಹೇಳಿ ಹಣ ಪಡೆದಿದ್ದಾನೆ. ಪೂಜೆ ನಡೆಯುತ್ತಿದೆ, ಇನ್ನೂ ಲಕ್ಷ ಹಣ ಬೇಕೆಂದು ಕೇಳಿದಾಗ ಯುವತಿಗೆ ಅನುಮಾನ ಬಂದು ಪ್ರಶ್ನಿಸಿದ್ದಾಳೆ. ಕೊಟ್ಟಿರುವ ಹಣ ವಾಪಸ್ ಕೇಳಿದ್ದಾಳೆ. ಆತ ಏನು ಮಾಡ್ತಿಯೋ ಮಾಡಿಕೋ ಎಂದು ಬೆದರಿಸಿದ್ದಾನೆ.
ಪೊಲೀಸರು ಆನ್‌ಲೈನ್ ವಂಚನೆ, ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ. ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳ ಮಾಹಿತಿ ಆಧರಿಸಿ ಆರೋಪಿಗಳ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.


