ಯಲ್ಲಾಪುರದಲ್ಲಿ ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ರಂಜಿತಾ ಬನ್ಸೊಡೆ ಎಂಬ ಹಿಂದೂ ಯುವತಿಯ ಕೊಲೆ ಮಾಡಿ ಪರಾರಿಯಾಗಿದ್ದ ಮಹಮ್ಮದ್ ರಫೀಕ್ ಎಂಬಾತರಾಮಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮಹಮ್ಮದ್ ರಫೀಕ್ ಕಾಳಮ್ಮನಗರದ ನಿವಾಸಿ, ಆರೋಪಿ ರಫೀಕ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಶನಿವಾರ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಯುವತಿಯ ಕೊಲೆಯಾಗಿತ್ತು. ಆಕೆ ರಾಮಾಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಗಂಡನಿಂದ ವಿಚ್ಛೇದನ ಪಡೆದು ತವರು ಮನೆಯಲ್ಲಿ ನೆಲೆಸಿದ್ದ ರಂಜಿತಾಗೆ ತನ್ನನ್ನು ಮದುವೆಯಾಗುವಂತೆ ರಫೀಕ್ ಪೀಡಿಸುತ್ತಿದ್ದನು. ಮದುವೆಯಾಗಲು ರಂಜಿತಾ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ರಫೀಕ್ ಶನಿವಾರ ದಾರಿಯಲ್ಲಿ ಅಡ್ಡಗಟ್ಟಿ ಕುತ್ತಿಗೆಗೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದನು.
ಹುಬ್ಬಳ್ಳಿ ಕಿಮ್ಸ್‌ಗೆ ಒಯ್ಯುವಾಗ ಮಾರ್ಗಮಧ್ಯೆ ರಂಜಿತಾಳ ಪ್ರಾಣ ಹೋಗಿತ್ತು. ರಂಜಿತಾ ಸಹೋದರಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಯಲ್ಲಾಪುರ ಪೊಲೀಸರು ಆರೋಪಿಯ ಹುಡುಕಾಟ ನಡೆಸಿದ್ದರು.
ಪ್ರಕರಣದ ಬಳಿಕ ಯಲ್ಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು, ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇಂದು ಯಲ್ಲಾಪುರ ಬಂದ್ ಮಾಡಲು ಜನ ಮುಂದಾಗಿದ್ದರು. ಆರೋಪಿ ರಫೀಕ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.


