ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ಡಿಲೀಟ್ ಮಾಡಬೇಕು ಎಂದು ಎಲಾನ್ ಮಸ್ಕ್ ನೇತೃತ್ವದ ಸಾಮಾಜಿಕ ಮಾಧ್ಯಮ ಎಕ್ಸ್‌ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಎಲಾನ್ ಮಸ್ಕ್ ನೇತೃತ್ವದ ಸಾಮಾಜಿಕ ಮಾಧ್ಯಮ ಎಕ್ಸ್‌ನ AI ಅಪ್ಲಿಕೇಶನ್ ಗ್ರೋಕ್‌ನಿಂದ ಶೇರ್ ಆಗುತ್ತಿರುವ ಅಶ್ಲೀಲ ಮತ್ತು ಕಾನೂನುಬಾಹಿರ ಪೋಟೊಗಳು ಮತ್ತು ಕಂಟೆಂಟ್‌ಗಳನ್ನು ಡಿಲಿಟ್ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಆ ವಿಷಯಗಳನ್ನು 72 ಗಂಟೆಯೊಳಗೆ ತೆಗೆದುಹಾಕದಿದ್ದರೆ ಕಾನೂನಿನಡಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿ ಶಾಸನಬದ್ಧ ಹೊಣೆಗಾರಿಕೆಗಳನ್ನು ಪಾಲಿಸದ ಕಾರಣ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಕ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯ ಅಧಿಕಾರಿಗೆ ನೋಟಿಸ್ ನೀಡಿದೆ.
ಗ್ರೋಕ್ AI ಆಧಾರಿತ ಸೇವೆಗಳನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಯುಳ್ಳ ವಿಷಯವನ್ನು ಪೋಸ್ಟ್ ಮಾಡುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಅಪ್‌ಲೋಡ್ ಮಾಡುವುದನ್ನು ತಡೆ ಗಟ್ಟಲು ತಕ್ಷಣ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕೆಂದು ಸಚಿವಾಲಯ ಹೇಳಿದೆ.
ಎಕ್ಸ್ ವೇದಿಕೆಯಲ್ಲಿ ಲಭ್ಯವಾಗುವ ಗ್ರೋಕ್ AIಯನ್ನು ಬಳಕೆದಾರರು ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ಅಸಭ್ಯವಾಗಿ ಪೋಸ್ಟ್ ಮಾಡಲು, ರಚಿಸಲು, ಪ್ರಕಟಿಸಲು, ನಕಲಿ ಖಾತೆಗಳನ್ನು ರಚಿಸಲು ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಿ ಎಂದು ಸಚಿವಾಲಯ ಆದೇಶಿಸಿದೆ.


