Saturday, January 03, 2026
Menu

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ: ಮೆಕಾನಿಸಂ ಎಲ್ಲಿ ?

ತಮಿಳುನಾಡು, ಅಂಧ್ರ ಪ್ರದೇಶದಲ್ಲಿ ಸರ್ಕಾರಿ ನೌಕರಿ ನೇಮಕಾತಿ ವಿಷಯದಲ್ಲಿ ಹಲವು ಹತ್ತು ಸುಧಾರಣೆಗಳು ಜಾರಿಯಲ್ಲಿವೆ. ಈ ರಾಜ್ಯಗಳ ನೇಮಕ ಪ್ರಕ್ರಿಯೆ ಸುಗಮ ಮತ್ತು ಸರಳವಾಗಿದ್ದು ಜನಮೆಚ್ಚುಗೆಯನ್ನೂ ಪಡೆದಿವೆ. ಆದರೆ ಕರ್ನಾಟಕದಲ್ಲಿ ಪ್ರತಿಯೊಂದು ನೇಮಕಾತಿಯೂ ವಿವಾದಕ್ಕೆ ಸಿಲುಕಿ ಕೋರ್ಟ್ ಮತ್ತು ಟ್ರಿಬೂನಲ್‌ನಲ್ಲಿ ವರ್ಷಾನುಗಟ್ಟಳೆ ಗಿರಕಿ ಹೊಡೆಯುವಂತಾಗಿದೆ. ರಾಜ್ಯದ ಯುವಜನತೆ ಹತಾಶೆಗೊಂಡಿರುವುದು ಇದರಿಂದಲೇ.

ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರವೀಗ ಸಕಾರಾತ್ಮಕ ಹೆಜ್ಜೆಯನ್ನಿಟ್ಟಿದೆ. ಪ್ರತಿ ವರ್ಷ ಸಾವಿರಾರು ಯುವಕ, ಯುವತಿಯರು ಪದವಿಯನ್ನು ಹೊತ್ತು ವಿಶ್ವವಿದ್ಯಾಲಯಗಳಿಂದ ಹೊರಬರುತಿದ್ದು ಇವರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೌಕರಿ ಭರವಸೆಯನ್ನು ನೀಡುವುದು ಈ ಸರ್ಕಾರದ ಹೊಣೆಗಾರಿಕೆ ಕೂಡಾ. ಎರಡು ದಿನಗಳ ಹಿಂದೆಯಷ್ಟೆ ಮಾಜಿ ಮಂತ್ರಿ ಆರ್ ವಿ ದೇಶಪಾಂಡೆ ನೇತೃತ್ವದ ಆಡಳಿತ ಸುಧಾರಣೆ ಆಯೋಗವು ಸಲ್ಲಿಸಿರುವ ಶಿಫಾರಸು ಗಮನಾರ್ಹ.

ಸಿ ಮತ್ತು ಡಿ ವೃಂದದಲ್ಲಿ ಖಾಲಿಯಿರುವ ಹುದ್ದೆಗಳನ್ನು ಸರ್ಕಾರ ಗುತ್ತಿಗೆ ಆಧಾರದ ಮೂಲಕ ಹುದ್ದೆಗಳನ್ನು ತುಂಬುವುದಕ್ಕೆ ದೇಶಪಾಂಡೆ ಆಕ್ಷೇಪ ಸಲ್ಲಿಸಿರುವುದು ಸರಿಯಷ್ಟೆ. ಆದರೆ ಇಂತಹ ಹುದ್ದೆಗಳ ನೇರ ಅಥವಾ ಗುತ್ತಿಗೆ ಆಧಾರದ ನೇಮಕಾತಿ ಯಿಂದ ಕೆಲವು ತೊಡಕುಗಳು ತಲೆದೋರಲಿದ್ದು, ಇದರ ನಿವಾರಣೆಗೆ ಸರ್ಕಾರ ಮುಂದಾಗಬೇಕಿದೆ, ರಾಜ್ಯ ಲೋಕಸೇವಾ ಆಯೋಗದ ಮೂಲಕವೇ ಸರ್ಕಾರ ಮತ್ತಿದರ ಅಂಗಸಂಸ್ಥೆಗಳಲ್ಲಿ ಖಾಲಿಯಿರುವ ನೂರಾರು ಹುದ್ದೆ ಭರ್ತಿಗೊಳಿಸಲು ಸಾಧ್ಯವೇ ಎಂಬುದು ಗಂಭೀರ ಪ್ರಶ್ನೆ . ಮೊಟ್ಟ ಮೊದಲಿಗೆ ರಾಜ್ಯ ಲೋಕಸೇವಾ ಆಯೋಗವು ನಿರ್ವಹಿಸುವ ಪೈಪೋಟಿ ಪರೀಕ್ಷೆಗಳ ಬಗ್ಗೆ ನಾಡಿನ ಯುವಜನತೆಯಲ್ಲಿ ಆಯೋಗವು ಭರವಸೆ ಮೂಡಿಸಬೇಕಿದೆ. ಎಲ್ಲಿಯವರೆಗೆ ಆಯೋಗವು ಇದನ್ನು ಪಾರ ದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ರಾಜ್ಯದ ಪ್ರಾಮಾಣಿಕ ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ .

ಇನ್ನು ಒಳಮೀಸಲು ಮತ್ತು ಕಲ್ಯಾಣ ಕರ್ನಾಟಕ ಭಾಗದ ವಿಶೇಷ ಮೀಸಲು ಗೊಂದಲವೂ ನೇಮಕಾತಿಗೆ ಸಂಬಂಧಿಸಿದ ವಿಷಯವಾಗಿದೆ. ಇದನ್ನು ಸರ್ಕಾರ ಸಮರ್ಪಕ ಪ್ರಮಾಣದಲ್ಲಿ ಇತ್ಯರ್ಥಗೊಳಿಸಲು ಮುಂದಾಗಬೇಕಿದ್ದು ಇದರ ಹಿಂದಿರುವ ಕಾನೂನು ಸಾಧಕ- ಬಾಧಕಗಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಇಲ್ಲವಾದಲ್ಲಿ ಸರ್ಕಾರದ ಆಲೋಚನೆ ಮತ್ತು ಕ್ರಿಯಾ ಯೋಜನೆಗಳಂತೆ ನೇಮಕಾತಿ ಪ್ರಕ್ರಿಯೆ ಸುಗಮವಾಗುವುದಿಲ್ಲ . ಸರ್ಕಾರದ ಬಹುತೇಕ ನೇಮಕಾತಿ ನಿಯಮಾ ವಳಿ ಮತ್ತು ತೀರ್ಮಾನಗಳನ್ನು ಕೆಎಟಿ ಮತ್ತು ಹೈಕೋರ್ಟ್ ಅನೂರ್ಜಿತಗೊಳಿಸಿದೆ. ಹೀಗಾದಲ್ಲಿ ರಾಜ್ಯದಲ್ಲಿ ಯಾವುದೇ ಒಂದು ಸರ್ಕಾರಿ ಹುದ್ದೆಯನ್ನೂ ಸಕಾಲದಲ್ಲಿ ಸರ್ಕಾರ ಭರ್ತಿಗೊಳಿಸಲಾಗದು. ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ವಿಷಯದಲ್ಲಿ ಸರ್ಕಾರದ ನೇಮಕಾತಿ ನಿಯಮಾವಳಿ ಇಂದು ಬದಲಾಗಬೇಕಿದೆ. ತ್ವರಿತ ಮತ್ತು ಪಾರದರ್ಶಕ ನೇಮಕಾತಿಗೆ ಬೇಕಿರುವ ಮೆಕಾನಿಸಂ ಅನ್ನು ಸರ್ಕಾರ ಮತ್ತು ಆಯೋಗ ಇಂದು ರೂಪಿಸುವುದು ಅಗತ್ಯವಾಗಿದೆ.

ಕಳೆದ ಎರಡು ದಶಕದಲ್ಲಿ ರಾಜ್ಯದಲ್ಲಿ ಸರ್ಕಾರ ಮಟ್ಟದಲ್ಲಿ ಖಾಲಿಯಾದ ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿ ಆಗದಿರುವುದು ದುರದೃಷ್ಟಕರ. ತಮಿಳುನಾಡು, ಅಂಧ್ರ ಪ್ರದೇಶದಲ್ಲಿ ಸರ್ಕಾರಿ ನೌಕರಿ ನೇಮಕಾತಿ ವಿಷಯದಲ್ಲಿ ಹಲವು ಹತ್ತು ಸುಧಾ ರಣೆಗಳು ಜಾರಿಯಲ್ಲಿವೆ. ಪಕ್ಕದ ರಾಜ್ಯದಲ್ಲಿ ಈ ನೇಮಕ ಪ್ರಕ್ರಿಯೆ ಸುಗಮ ಮತ್ತು ಸರಳವಾಗಿದ್ದು ಜನಮೆಚ್ಚುಗೆಯನ್ನೂ ಪಡೆದಿದೆ. ಆದರೆ ರಾಜ್ಯದಲ್ಲಿ ಪ್ರತಿಯೊಂದು ನೇಮಕಾತಿಯೂ ಕೋರ್ಟ್ ಮತ್ತು ಟ್ರಿಬೂನಲ್ ಸುತ್ತಲೂ ಗಿರಕಿ ಹೊಡೆಯುವಂತಾ ಗಿದೆ. ಸರ್ಕಾರದಿಂದ ಸಾವಿರಾರು ಹುದ್ದೆಗಳ ಭರ್ತಿ ಎಂಬ ಸುದ್ದಿ ಸಾರ್ವತ್ರಿಕವಾದ ಕೂಡಲೇ ಓರ್ವ ಸಾಮಾನ್ಯ ಯುವಕನ ಮನಸಿನಲ್ಲಿ ಮೂಡುವ ಆಸೆಗಳನ್ನು ಸರ್ಕಾರ ಬಲಗೊಳಿಸಿ ಯುವ ಸಮುದಾಯಕ್ಕೆ ಭರವಸೆ ಮೂಡಿಸಬೇಕು.

Related Posts

Leave a Reply

Your email address will not be published. Required fields are marked *