Menu

ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ ಬಿಜೆಪಿ ಮಾಜಿ ಶಾಸಕ ರಾಮದಾಸ್

na ramadas

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 32 ವರ್ಷಗಳ ಕಾಲ ರಾಜಕೀಯ ಮಾಡಿದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್‌ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ವತಿಯಿಂದ ಹೊರತಂದಿರುವ ಕ್ಯಾಲೆಂಡ‌ರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನು ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುತ್ತೂರು ಸ್ವಾಮೀಜಿ ಸೇರಿದಂತೆ ನನ್ನನ್ನು ಹತ್ತಿರದಿಂದ ಬಲ್ಲ ಅನೇಕರು ನೀವು ಮತ್ತೆ ಸಕ್ರಿಯವಾಗಿ ಸಮಾಜದ ಜತೆ ಇರಬೇಕು ಎಂದು ಹೇಳುತ್ತಿದ್ದಾರೆ. ನನಗೆ ಚುನಾವಣಾ ರಾಜಕೀಯ ಸಾಕಾಗಿದೆ. ಚುನಾವಣಾ ರಾಜಕೀಯ ಮಾಡುವುದಿಲ್ಲ. ಪರಿಸರ ಉಳಿಸುವ ನಿಟ್ಟಿನಲ್ಲಿ ಸಮಾಜ ಸೇವೆ ಮುಂದುವರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.

ಶ್ರೀರಾಮನಿಗೆ ನಾಳೆ ಪಟ್ಟಾಭಿಷೇಕ ಆಗಬೇಕಿತ್ತು. ಹಿಂದಿನ ರಾತ್ರಿ ದಶರಥನ ಮೂಲಕ ಕಾಡಿಗೆ ಹೋಗುವಂತೆ ಹೇಳಿಸಲಾಯಿತು. ಅಂತಹ ಶ್ರೀರಾಮಚಂದ್ರನೇ ಮರು ಮಾತನಾಡದೇ ಕಾಡಿಗೆ ಹೊರಟು ಹೋದ. ನಾನು ರಾಮದಾಸ, ನಾನೇನು ಮಾಡಲಿ. ಭಾರತೀಯ ಜನತಾ ಪಕ್ಷ ನನಗೆ ತಾಯಿ ಇದ್ದಂತೆ. ಯಾವುದೇ ಕಾರಣಕ್ಕೂ ತಾಯಿಗೆ ದ್ರೋಹ ಮಾಡುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಅವರು ಹೇಳಿದರು.

ನಾನು ಊಟಕ್ಕೆ ಕುಳಿತಿದ್ದೆ. ನನ್ನನ್ನು ಎಬ್ಬಿಸಿ ಬೇರೆಯವರನ್ನು ತಂದು ಕೂರಿಸಿದರು. ನಾನು ಎಲ್ಲರಿಗೂ ಊಟ ಬಡಿಸಿದ್ದೇನೆ. ಅದ್ಯಾವುದರ ಬಗ್ಗೆಯೂ ನನಗೆ ದುಃಖವಿಲ್ಲ. ನನ್ನ ತಂದೆ ಮಾಜಿ ಸೈನಿಕ. ನಾನೂ ಸೇನೆಗೆ ಸೇರಬೇಕು ಎಂದುಕೊಂಡಿದ್ದೆ. ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ನನಗಿನ್ನೂ ಚೆನ್ನಾಗಿ ನೆನಪಿದೆ. 1994ರ ನವೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು ರಾತ್ರಿ ಮನೆಗೆ ಬಂದೆ. ಒಂದೆ ಕಡೆ ತಂದೆ, ಮತ್ತೊಂದು ಕಡೆ ತಾಯಿ ನಿಂತಿದ್ದರು. ಇಬ್ಬರೂ ಹೆಗಲ ಮೇಲೆ ಕೈಹಾಕಿ ರಾಜಕೀಯ ತುಂಬಾ ಕೆಟ್ಟದ್ದು, ನಿನ್ನ ಕೈ ಕೆಸರು ಮಾಡಿಕೊಳ್ಳಬೇಡ, ರಕ್ತ ಅಶುದ್ಧ ಮಾಡಿಕೊಳ್ಳಬೇಡ. 30 ವರ್ಷ ರಾಜಕೀಯ ಮಾಡಿದ್ದೇನೆ. ಈಗಲೂ ನಾನು ಕೈ ಮತ್ತು ರಕ್ತವನ್ನು ಅಶುದ್ಧ ಮಾಡಿಕೊಂಡಿಲ್ಲ ಎಂದು ಅವರು ಭಾವುಕರಾಗಿ ನುಡಿದರು.

ನನ್ನ ಕುಟುಂಬದವರ ಆಸ್ತಿ ನನ್ನದಲ್ಲ

ಅವರಿಗೇನು ಕೊರತೆ, ಅರ್ಧ ಮೈಸೂರು ಅವರದ್ದು ಅಂತೆಲ್ಲ ಹೊರಗೆ ಜನ ಮಾತನಾಡುತ್ತಾರೆ. ನನ್ನ ಕುಟುಂಬದಲ್ಲಿ ಉದ್ಯಮಿಗಳಿದ್ದಾರೆ, ಅದರಲ್ಲಿ ತಪ್ಪೇನು? ಅವರ ಬಳಿ ಇರುವ ಯಾವುದೂ ನನ್ನದಲ್ಲ. 1.50 ಲಕ್ಷ ರೂ. ನಿವೃತ್ತ ವೇತನ ಬರುತ್ತೆ, ನನ್ನ ಜೀವನಕ್ಕೆ ಅಷ್ಟು ಸಾಕೆಂದು ಅವರು ಹೇಳಿದರು.

ನಾನು ಚುನಾವಣಾ ರಾಜಕೀಯ ಮಾಡುವುದಿಲ್ಲ. ರೋಗ ಬಂದಾಗ ಚಿಕಿತ್ಸೆ ಪಡೆಯುವುದು ಬೇರೆ, ಕಾಯಿಲೆಯೇ ಬಾರದ ರೀತಿಯಲ್ಲಿ ಪರಿಸರ ಉಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಒಂದು ವರ್ಷದಿಂದ ಅಧ್ಯಯನ ಮಾಡುತ್ತಿದ್ದು, ಶೀರ್ಘದಲ್ಲೇ ಪರಿಸರ ಸಂರಕ್ಷಣಾ ಕಾರ್ಯದ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಅವರು ನುಡಿದರು.

ಈ ಹಿಂದೆ ಜನೌಷಧಿ ಕೇಂದ್ರ ತೆರೆದಾಗ ಔಷಧಿ ಕಂಪನಿಗಳು ಲಾಬಿ ಮಾಡಿದವು. ರಾಜ್ಯದ ವಿವಿಧೆಡೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿ, ಭಾವಚಿತ್ರಕ್ಕೆ ಅಪಮಾನಿಸಿದವು. ಆದರೆ ಎದೆಗುಂದಲಿಲ್ಲ. ಬಳಿಕ ಅದು ಎಷ್ಟು ಜನಪ್ರಿಯವಾಯಿತೆಂದರೆ ದೇಶದಾದ್ಯಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರವಾಗಿ ಸಾವಿರಾರು ಸಂಖ್ಯೆಯಲ್ಲಿ ಆರಂಭವಾದವು.

Related Posts

Leave a Reply

Your email address will not be published. Required fields are marked *