ಕಾರವಾರ: ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸೋಗಿನಲ್ಲಿ ವಿಡಿಯೋ ಕಾಲ್ ಮೂಲಕ ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ನಿವೃತ್ತ ಶಿಕ್ಷಕರೊಬ್ಬರನ್ನು ‘ಡಿಜಿಟಲ್ ಅರೆಸ್ಟ್ ಮಾಡಿರುವ ಸೈಬರ್ ವಂಚಕರು 1.61 ಕೋಟಿ ರೂ ವಂಚಿಸಿರುವ ಘಟನೆ ನಡೆದಿದೆ.
ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ಪಾಲ್ಡೆನ್ (72)ಅವರಿಗೆ ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಮಹಾರಾಷ್ಟ್ರದ ಕೋಲಾಬಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದನು.
ಬಳಿಕ ಮುಂಬೈನಲ್ಲಿ ಅರೆಸ್ಟ್ ಆಗಿರುವ ಉಗ್ರಗಾಮಿ ಸಂಘಟನೆಯ ನಾಯಕನ ಬಳಿ ಪತ್ತೆಯಾದ ನೂರಾರು ಎಟಿಎಂ ಕಾರ್ಡ್‌ಗಳಲ್ಲಿ ನಿಮ್ಮ ಹೆಸರಿನ ಕಾರ್ಡ್ ಕೂಡ ಇದೆ ನಿಮ್ಮ ಖಾತೆಯಿಂದ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಮೇಲೆ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದ.
ವಂಚಕನು ಪೊಲೀಸರು ಸಮವಸ್ತ್ರ ಧರಿಸಿ ವಿಡಿಯೋ ಕರೆ ಮಾಡುವ ಮೂಲಕ ಪಿರ್ಯಾದಿಯ ನಂಬುವಂತೆ ಮಾಡಿದ್ದನು. ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಕಳುಹಿಸಿ ವಂಚಿಸಿದ್ದಲ್ಲದೆ, ನಿಮ್ಮ ಹಣವನ್ನು ‘ನ್ಯಾಷನಲ್ ಫಂಡ್’ಗೆ ಜಮಾ ಮಾಡಬೇಕು, ತನಿಖೆ ಮುಗಿದ ಮೇಲೆ ಹಣ ವಾಪಸ್ ನೀಡಲಾಗುವುದು ಎಂದು ನಾಟಕವಾಡಿದ್ದನು. ಯಾರ ಬಳಿಯೂ ಈ ವಿಷಯ ಚರ್ಚಿಸದಂತೆ ಬೆದರಿಸಿ, ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸಾ ಆ್ಯಪ್ ಮೂಲಕ ವರದಿ ನೀಡುವಂತೆ (ಡಿಜಿಟಲ್ ಅರೆಸ್ಟ್) ಸೂಚಿಸಿದ್ದ.
ಇದನ್ನು ನಂಬಿದ ಪಾಲ್ಡೆನ್ ಅವರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಎಫ್ಡಿ ಹಣ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಸುಮಾರು 1.61 ಕೋಟಿ ರೂಯನ್ನು ಹಂತ ಹಂತವಾಗಿ ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ತಡವಾಗಿ ತಾನು ಮೋಸ ಹೋಗಿರುವುದು ತಿಳಿದ ಪಾಲ್ಡೆನ್ ಅವರು ಕಾರವಾರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


