ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ಬ್ಯಾನರ್ ಕಟ್ಟುವ ವಿಚಾರಕ್ಕೆ ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಮೃತಪಟ್ಟ ರಾಜಶೇಖರ್ ರೆಡ್ಡಿಗೆ ಯಾರ ಗನ್‌ನಿಂದ ಬುಲೆಟ್ ಹಾರಿದೆ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ದುರಂತಕ್ಕೆ ಕಾರಣವಾದ ಬುಲೆಟ್‌ನ ಮೂಲದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಯಾರ ಗನ್‌ನಿಂದ ಬುಲೆಟ್ ಬಂದಿದೆ ಎಂಬುದು ಗೊತ್ತಾಗಬೇಕು. ಅದು ಬಿಜೆಪಿ ಗನ್‌ನಿಂದ ಬಂದಿದೆಯಾ, ಕಾಂಗ್ರೆಸ್‌ನವರ ಗನ್‌ನಿಂದ ಬಂದಿದೆಯಾ ಎಂದು ಪತ್ತೆಹಚ್ಚಬೇಕಿದೆ ಎಂದಿದ್ದಾರೆ.
ಬಳ್ಳಾರಿ ಪೊಲೀಸ್ ವರಿಷ್ಠರು ಖಾಸಗಿ ಬುಲೆಟ್ ಎಂದು ಮಾಹಿತಿ ನೀಡಿದ್ದಾರೆ. ಸತೀಶ್ ರೆಡ್ಡಿ ತಮ್ಮ ಭದ್ರತೆಗಾಗಿ ಗನ್ ಇಟ್ಟುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ರಾಜಶೇಖರ್ ರೆಡ್ಡಿ ಅವರಿಗೆ ತಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜಶೇಖರ್ ರೆಡ್ಡಿ ಅವರ ಸಾವಿಗೆ ಕಾರಣವಾದ ಬುಲೆಟ್ ಮತ್ತು ಗನ್ ಮೂಲದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಶಾಸಕ ಭರತ್ ರೆಡ್ಡಿ ಅಪ್ತ ಸತೀಶ್ ರೆಡ್ಡಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದು, ನನ್ನನ್ನು ಫಿನಿಶ್ ಮಾಡಲೆಂದೇ ಈ ದಾಳಿ ಗುಂಡಿನ ದಾಳಿ ನಡೆಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ಮನೆ ಬಳಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಜನಾರ್ದನ ರೆಡ್ಡಿಯ ಬಂಧಿಸುವಂತೆ ಅವರ ನಿವಾಸದೆದುರೇ ಶಾಸಕ ಭರತ್ ರೆಡ್ಡಿ ಆಗ್ರಹಿಸುತ್ತಿದ್ದು, ಶ್ರೀರಾಮುಲು ಜನಾರ್ದನ ರೆಡ್ಡಿ ನಿವಾಸ ದಲ್ಲೇ ಉಳಿದುಕೊಂಡಿದ್ದಾರೆ. ಶಾಸಕ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್, ದಮ್ಮೂರ ಶೇಖರ್ ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


