ಬಳ್ಳಾರಿ ನಗರದಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆಯ ಮುಂದೆ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ಗುಂಪುಗಳ ಮಧ್ಯೆ ನಡೆದ ಗಲಾಟೆ ತೀವ್ರಗೊಂಡು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (28) ಖಾಸಗಿ ವ್ಯಕ್ತಿಯ ರಿವಾಲ್ವಾರ್‌ನಿಂದ ಹಾರಿದ ಗುಂಡು ತಗುಲಿ ಮೃತಪಟ್ಟಿರುವುದಾಗಿ ಜಿಲ್ಲಾ ಉಸ್ತುವಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಂಜಿತ್ ಕುಮಾರ್ ಭಂಡಾರು ಹೇಳಿದ್ದಾರೆ.
ಗುರುವಾರ ರಾತ್ರಿ ನಡೆದ ಗಲಭೆಯಲ್ಲಿ ಗಲಾಟೆ ನಿಯಂತ್ರಿಸಲು ಪೊಲೀಸರು ಕೂಡ ಗಾಳಿಯಲ್ಲಿ ಗುಂಡು ಹಾರಿಸಿದ್ದರು, ಆದರೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪೊಲೀಸರ ಗುಂಡಿನಿಂದ ಮೃತಪಟ್ಟಿಲ್ಲ, ಖಾಸಗಿ ವ್ಯಕ್ತಿಯ ರಿವಾಲ್ವರ್‌ನಿಂದ ಹಾರಿಸಲಾದ ಗುಂಡು ತಗುಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಶನಿವಾರ ನಡೆಯಲಿರುವ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಬ್ಯಾನರ್ ಕಟ್ಟುವ ವಿಚಾರದಲ್ಲಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಲುಪಿದೆ. ಕಲ್ಲು ತೂರಾಟ, ಪೊಲೀಸರ ಲಾಠಿ ಪ್ರಹಾರದ ನಡುವೆ ಗುಂಡಿನ ಸದ್ದು ಕೇಳಿಬಂದಿತ್ತು. ಗಾಯಗೊಂಡಿದ್ದ ರಾಜಶೇಖರ್ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಪೊಲೀಸರ ಗುಂಡಿನಿಂದ ರಾಜಶೇಖರ್ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್, ಸ್ಥಳದಲ್ಲಿ ಖಾಸಗಿ ವ್ಯಕ್ತಿ ಗುಂಡು ಹಾರಿಸಿದ ಮಾಹಿತಿ ಇದೆ. ಮೃತನ ದೇಹ ಸೇರಿರುವುದು ಖಾಸಗಿ ರಿವಾಲ್ವಾರ್ ಗುಂಡು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಅವರ ವಿರುದ್ಧ ಎಫ್‌ಐಆರ್ ಆಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ. ಅವರ ಕುತಂತ್ರದಿಂದಲೇ ಕಾರ್ಯಕರ್ತನ ಪ್ರಾಣ ಹೋಗಿದೆ ಎಂದು ನಾರಾ ಭರತ್ ರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಗಲಭೆಗೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.


