ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ವಿಚಾರದಲ್ಲಿ “ದುಡಿಯೋ ಜನರ ವೇದಿಕೆ”ಯ ಸಾಮಾಜಿಕ ಕಾರ್ಯಕರ್ತರು ನಿರಾಶ್ರಿತಗೊಂಡವರ ಬೆಂಬಲಕ್ಕೆ ನಿಂತಿದ್ದು, 2012ರಲ್ಲಿ ಫಕೀರ್ ಲೇಔಟ್‌ನಲ್ಲಿ ಮನೆಗಳಿದ್ದ ಗೂಗಲ್ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಡಿ ಇಲ್ಲಿ ಮನೆಗಳು ನಿರ್ಮಾಣಗೊಂಡಿರುವುದಲ್ಲ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡ ಅವರ ಆಡಳಿತಾವಧಿಯಲ್ಲೂ ಇಲ್ಲಿ ಮನೆಗಳಿದ್ದವು ಎಂದು ಹೇಳಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಮನೆ ನೀಡಲು ಮುಂದಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ಬಾಂಗ್ಲಾದೇಶಿಗರಿಗೆ ಮನೆ ನೀಡುವ ಮೂಲಕ ಬೆಂಗಳೂರನ್ನು ಮಿನಿ ಬಾಂಗ್ಲಾ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಸಮಾಧಾನಪಡಿಸಲು ಸರ್ಕಾರ ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ಇತರ ರಾಜ್ಯಗಳಿಂದ ವಲಸೆ ಬಂದವರಿಗೆ ಮನೆಗಳನ್ನು ಮಂಜೂರು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೇರಳದ ಒತ್ತಡಕ್ಕೆ ಮಣಿಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಮೂವತ್ತು ವರ್ಷಗಳ ಹಿಂದೆಯೇ ನಿವಾಸಿಗಳು ಇಲ್ಲಿ ವಾಸ್ತವ್ಯ ಮಾಡುತ್ತಿದ್ದು, ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಾರೆ. ದಾಖಲೆ ಹೊಂದಿರುವ ಕರ್ನಾಟಕ ನಿವಾಸಿಗಳಾಗಿದ್ದಾರೆಂದು “ದುಡಿಯೋ ಜನರ ವೇದಿಕೆ”ಯ ಕಾರ್ಯಕರ್ತ ಮನೋಹರ್ ಎಳವರ್ತಿ ತಿಳಿಸಿದ್ದಾರೆ.
ಕೋಗಿಲು ನಿರಾಶ್ರಿತರಿಗೆ ಮನೆಗಳನ್ನು ನೀಡುವ ನಿರ್ಧಾರಕ್ಕೆ ಜನರು ಹಾಗೂ ಪ್ರತಿಪಕ್ಷಗಳ ವಿರೋಧ ಹಾಗೂ ಟೀಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಣಿದಿದ್ದು, ಮನೆ ಹಂಚಿಕೆ ನಿರ್ಧಾರಕ್ಕೆ ಸದ್ಯಕ್ಕೆ ತಡೆ ನೀಡಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಆಶ್ರಯ ಯೋಜನೆ ಅಡಿ ಮನೆ ನೀಡುವುದಾಗಿ ಸರ್ಕಾರ ಹೇಳಿತ್ತು. ಜನವರಿ 2ಕ್ಕೆ ಮನೆ ಹಂಚಿಕೆ ಆಗಲಿದೆ ಎಂದೂ ಹೇಳಲಾಗಿತ್ತು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ , ಫಲಾನುಭವಿಗಳ ದಾಖಲೆ ಪರಿಶೀಲನೆಯ ನಂತರ ಮನೆ ಹಂಚಿಕೆ ಮಾಡಲಾಗುವುದು. ಜಿಬಿಎ ಮತ್ತು ರಾಜೀವ್ ಗಾಂಧಿ ವಸತಿ ನಿಗಮವು ದಾಖಲೆಗಳನ್ನು ಪರಿಶೀಲಿಸಿ ಬೈಯಪ್ಪನಹಳ್ಳಿಯಲ್ಲಿರುವ ಕರ್ನಾಟಕ ವಸತಿ ಮಂಡಳಿಯ ಕ್ವಾರ್ಟರ್ಸ್‌ಗಳಲ್ಲಿ ಅರ್ಹರಿಗೆ ವಸತಿ ಒದಗಿಸಲಿದೆ ಎಂದು ತಿಳಿಸಿದ್ದಾರೆ.


