Menu

ಕೋಗಿಲು ಪ್ರಕರಣಕ್ಕೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲವೆಂದು ಪಿಣರಾಯಿ ಸಮರ್ಥನೆ

ಕೋಗಿಲು ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ‘ಬುಲ್ಡೋಜರ್‌ ನ್ಯಾಯ’ ಎಂದು ಟೀಕಿಸಿ, ಕರ್ನಾಟಕ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲ ಎನ್ನುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಆಂತರಿಕ ವಿಷಯದಲ್ಲಿ ಮೂಗು ತೂರಿಸದಂತೆ ಕರ್ನಾಟಕ ಸರ್ಕಾರ ಎಚ್ಚರಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯನ್‌, ಇಂತಹ ನೆಲಸಮ ಕಾರ್ಯಾಚರಣೆಗಳು ನಡೆದಾಗ ಅಥವಾ ಅಲ್ಪಸಂಖ್ಯಾತರ ಹಕ್ಕುಗಳ ಪ್ರಶ್ನೆ ಉದ್ಭವಿಸಿದಾಗ ನನ್ನ ಪ್ರತಿಕ್ರಿಯೆಯನ್ನು ರಾಜ್ಯಕ್ಕೆ ಸೀಮಿತವಾಗಿರಿಸಿಕೊಳ್ಳುವುದಿಲ್ಲ. ಅಂತಹ ವಿಷಯಗಳಲ್ಲಿ ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡುತ್ತೇನೆ. ಗಾಜಾದಂತಹ ಬೇರೆ ವಿಷಯಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಹೇಳಿದರು.

ಬುಲ್ಡೋಜರ್‌ ಬಳಸಿ ಅಸಹಾಯಕ ಜನರನ್ನು ನಿರಾಶ್ರಿತರನ್ನಾಗಿಸಿದಾಗ ಆ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗುವುದು ಸಹಜ ಎಂದರು. ಸಿಎಂ ಸಿದ್ದರಾಮಯ್ಯ ಅವರನ್ನು ವರ್ಕಳದಲ್ಲಿ ಭೇಟಿಯಾದ ವೇಳೆ ಬೆಂಗಳೂರು ಮನೆಗಳ ತೆರವು ಕಾರ್ಯಾಚರಣೆ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದಿರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಸಚಿವ ಸಂಪುಟ ಸಭೆಗೆ ತಡವಾಗಿದ್ದರಿಂದ ಬೇಗ ಹೊರಟೆ, ಸಿದ್ದರಾಮಯ್ಯನವರೊಂದಿಗೆ ಆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ತೆರವು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ್ದ ವಿಜಯನ್‌, ಉತ್ತರ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಒಂದು ಬಗೆಯ ಕಾರ್ಯಾಚರಣೆಯನ್ನು ಬೆಂಗಳೂರು ಘಟನೆ ಪ್ರತಿಬಿಂಬಿಸುತ್ತಿದೆ, ಇದು ಬುಲ್ಡೋಜರ್‌ ನ್ಯಾಯ ಎಂದಿದ್ದರು.

Related Posts

Leave a Reply

Your email address will not be published. Required fields are marked *