Menu

ಕೋವಿಡ್ ಭ್ರಷ್ಟರ ಹೆಸರನ್ನು ಸರ್ಕಾರ ಬಹಿರಂಗಪಡಿಸಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

ಕೋವಿಡ್ ಸಮಯದಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಅಂದಿನ ಮಂತ್ರಿಗಳ ಕೈಚಳಕದಿಂದ ಕೈಲಾಗದಂತಹ ಸಾವಿರಾರು ಮಂದಿ ಆಮ್ಲಜನಕದ ಸಿಲಿಂಡರ್ ಮತ್ತು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪ್ರಾಣ ತ್ಯಜಿಸಿದರು! ಇಂತಹವರನ್ನು ಶಿಕ್ಷೆಗೆ ಗುರಿಪಡಿಸಲು ಸಿದ್ದರಾಮಯ್ಯ ಸರ್ಕಾರ ಮೀನ- ಮೇಷ ಎಣಿಸುವ ಅಗತ್ಯವಿಲ್ಲ . ಸರ್ಕಾರಕ್ಕೆ ಸಲ್ಲಿಕೆಯಾದ ನ್ಯಾ. ಡಿ ಕುನ್ಹಾ ವರದಿಯನ್ನು ಸಂಪುಟ ಸಭೆ ಅಂಗೀಕರಿಸಲಿ. ತಪ್ಪಿತಸ್ಥರ ಹೆಸರು ಬಹಿರಂಗಪಡಿಸಲಿ.

ನಾಲ್ಕು ವರ್ಷಗಳ ಹಿಂದೆ ದೇಶದಲ್ಲಿ ಅಲ್ಲದೆ ಮಹಾಮಾರಿ ಕೋವಿಡ್ ಇಡೀ ಪ್ರಪಂಚಕ್ಕೆ ಸವಾಲಾಗಿ ಪರಿಣಮಿಸಿತ್ತು. ಲಕ್ಷಾಂತರ ಮಂದಿ ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಕಳೆದುಕೊಂಡರು. ಆಪ್ತರನ್ನೂ ತ್ಯಜಿಸುವಂತಾಯಿತು. ಉದ್ಯೋಗ ಮತ್ತು ವ್ಯಾಪಾರವೂ ಅಸ್ತವ್ಯಸ್ತವಾಗಿ ಎಲ್ಲ ದೇಶಗಳ ಜನತೆ ಮತ್ತು ಬದುಕಿನ ಮೇಲೆ ಆಟವಾಡಿದ ಕೋವಿಡ್ ಅನ್ನು ಲೋಕವೆಂದೂ ಮರೆಯಲಾಗದು. ಇಂತಹ ಸಮಯದಲ್ಲಿ ರಾಜ್ಯದಲ್ಲಿ ಸೋಂಕಿತರ ಹೆಸರಿನಲ್ಲಿ ವೈದ್ಯಕೀಯ ಉಪಕರಣಗಳು ಮತ್ತು ಇತರೆ ಸಾಮಗ್ರಿ ಖರೀದಿಯಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಗುರುತರವಾದ ಅರೋಪಗಳು ಕೇಳಿ ಬಂದಿದ್ದವು.

ಅಂದಿನ ಆರೋಗ್ಯ ಮಂತ್ರಿಗಳಾಗಿದ್ದ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ. ಸುಧಾಕರ್ ಅವರ ಮೇಲೆ ಸಾಮಗ್ರಿ ಖರೀದಿ ವಿಚಾರದಲ್ಲಿ ಕೆಲ ಆರೋಪಗಳನ್ನು ಎಸಗಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಸರ್ಕಾರವು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿತ್ತು .

ಆರೋಪಗಳ ತನಿಖೆ ನಡೆಸಿರುವ ನ್ಯಾಯಮೂರ್ತಿ ಡಿಕುನ್ಹಾ ಅವರೀಗ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸರಿಯಷ್ಟೆ. ತನಿಖೆಯಿಂದ ಹೊರಬಂದ ಸತ್ಯ ಮತ್ತು ಕಟು ವಾಸ್ತವಗಳು ಬಹಿರಂಗವಾಗಬೇಕಿರುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತಿಮುಖ್ಯ. ಏಕೆಂದರೆ ಕೋವಿಡ್ ಸಮಯದಲ್ಲಿ ಅದೆಷ್ಟೋ ಬಂದಿ ಬಡವರು ಮತ್ತು ಆರ್ಥಿಕವಾಗಿ ದುರ್ಬಲರಾದವರು , ಸಮಾಜದಲ್ಲಿ ಗಣ್ಯರ ಶಿಫಾರಸುಗಳಿಲ್ಲದೆ ಅತಿಸಾಮಾನ್ಯರಾಗಿ ಬದುಕಿದವರು, ತಂದೆ, ತಾಯಿ ಅಕ್ಕ, ತಮ್ಮ ಮತ್ತು ಆಪ್ತರನ್ನು ಕಳೆದುಕೊಂಡಿದ್ದು ಕರುಣಾಜನಕ ! ಇದಕ್ಕೆ ಕಾರಣಕರ್ತರಾದವರು  ಗುರುತರ ಅಧಿಕಾರದಲ್ಲಿದ್ದವರು. ಕೋವಿಡ್ ತುತ್ತತುದಿಯಲ್ಲಿದ್ದಾಗ ಆಮ್ಲಜನಕ ಸಿಲಿಂಡರ್ ಮತ್ತು ಆಸ್ಪತ್ರೆಯ ಹಾಸಿಗೆ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ದಂಧೆ ಮತ್ತು ಅಕ್ರಮಗಳು ನಡೆದಿದ್ದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ.

ಸಮಾಜದಲ್ಲಿ ಉಳ್ಳವರು ಮತ್ತು ಧನಿಕರು ಈ ಸಮಯದಲ್ಲಿ ಹಣಬಲ ಮತ್ತು ಶಿಫಾರಸುಗಳ ಪ್ರಭಾವದಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಂಡರೆ, ಇದಾವುದರ ಭಾಗ್ಯವಿಲ್ಲದ ಅನಾಥರಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ದೊರಕದೆ ಅಸು ನೀಗಿದರು ! ಮನೆಗೆ ಬೆಂಕಿ ಬಿದ್ದಾಗ ಇದನ್ನು ಮೊದಲು ನಂದಿಸುವುದು ಮಾನವೀಯತೆ. ಆದರೆ ಈ ಬೆಂಕಿಯಲ್ಲಿ ಬೀಡಿ ಮುಟ್ಟಿಸಿಕೊಂಡವರನ್ನು ಏನ್ನನ್ನೋಣ? ಅಮಾಯಕರ ಪ್ರಾಣಗಳ ಜೊತೆ ಚೆಲ್ಲಾಟವಾಡಿದ ವ್ಯಕ್ತಿಗಳು ಅದೆಷ್ಟೇ ದೊಡ್ಡವರಿರಲಿ ಮತ್ತು ಪ್ರಭಾವಿ ಗಳೇ ಇರಲಿ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರ್ಕಾರದ ಹೊಣೆ. ಸಾವು, ಬದುಕಿನ ನಡುವೆಯಿದ್ದ ಕೋವಿಡ್ ಸೋಂಕಿತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ತಮ್ಮ ಜೇಬಿಗಿಳಿಸಿದ ಮಹಾಭ್ರಷ್ಟರು ಮತ್ತು ನಿರ್ದಯಿಗಳಿಗೆ ರಾಜ್ಯ ಸರ್ಕಾರ ಯಾವ ಬಗೆಯ ಅನುಕಂಪ ಮತ್ತು ರಿಯಾಯ್ತಿ ತೋರಿಸುವ ಅಗತ್ಯವಿಲ್ಲ. ಡಿಕುನ್ಹಾ ವರದಿಗೆ ಸಂಪುಟ ಸಭೆ ಒಪ್ಪಿಗೆ ನೀಡಲಿ ಮತ್ತು ಅದನ್ನು ಬಹಿರಂಗಪಡಿಸಲಿ. ಅಲ್ಲದೆ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಿ.

Related Posts

Leave a Reply

Your email address will not be published. Required fields are marked *