ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕೋಗಿಲು ಅಕ್ರಮ ನಿವಾಸಿಗಳ ಮನೆ ಧ್ವಂಸ ಪ್ರಕರಣದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ರಾಜ್ಯ ಸರ್ಕಾರದಿಂದ ಮನೆಗಳನ್ನು ನಾಳೆ ವಿತರಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಸತಿ ಸಚಿವ ಜಮೀರ್ ಅಹ್ಮದ್, ಹೊಸ ವರ್ಷದ ದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅರ್ಹರನ್ನು ಗುರುತಿಸಲು ಸಾಕಷ್ಟು ಸಮಯ ತೆಗೆದುಕೊಂಡ ಕಾರಣ ಒಂದು ದಿನ ತಡವಾಗಿ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಕೋಗಿಲುನಲ್ಲಿ 257 ಮನೆಗಳು ಇದ್ದವು. ಇದರಲ್ಲಿ 157 ಮನೆಗಳನ್ನು ನೆಲಸಮ ಮಾಡಲಾಗಿದೆ. ಇದರಲ್ಲಿ ಅರ್ಹರಿಗೆ ಮಾತ್ರ ಸರ್ಕಾರದಿಂದ ಶಾಶ್ವತ ಆಶ್ರಯ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದಿಂದ ಮನೆ ಹಂಚಿಕೆ ಮಾಡಲು ಕರ್ನಾಟಕದ ಮೂಲ ನಿವಾಸಿಗಳೇ ಆಗಿರಬೇಕು ಮತ್ತು ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂಬ ನಿಯಮ ಇದೆ. ಈ ಮಾನದಂಡದ ಪ್ರಕಾರವೇ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ನುಡಿದರು.
ಇದೇ ವೇಳೆ ಮನೆ ಹಂಚಿಕೆಗೆ ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಜಮೀರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯವರು ಬಾಂಗ್ಲಾದೇಶದವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಬಾಂಗ್ಲಾದವರಿಗೆ ಬೆಂಗಳೂರಿನಲ್ಲಿ ಮನೆ ನೀಡಲು ಸಾಧ್ಯವೇ? ಬಾಂಗ್ಲಾದವರು ಬೆಂಗಳೂರಿನಲ್ಲಿ ನೆಲಸಲು ಸಾಧ್ಯವೇ? ಎಂದು ಅವರು ಪ್ರಶ್ನೆಸಿದರು.


