Thursday, January 01, 2026
Menu

ಕೇರಳ ಸಿಎಂಗೂ- ಕರ್ನಾಟಕಕ್ಕೂ ಏನು ಸಂಬಂಧ?: ಸಚಿವ ಬೈರತಿ ಸುರೇಶ್ ಕಿಡಿ

byrati suresh

ಬೆಂಗಳೂರು: ಕೇರಳ ಮುಖ್ಯಮಂತ್ರಿಗೂ ಕರ್ನಾಟಕಕ್ಕೂ ಏನು ಸಂಬಂಧ ಇದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಹೆಬ್ಬಾಳ ಮೇಲ್ಸೇತುವೆಯ ನೂತನ ಲೂಪ್ ಉದ್ಘಾಟನೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಗಿಲು ನಿರಾಶ್ರಿತರ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಪರೋಕ್ಷವಾಗಿ ಈ ಆಕ್ರೋಶ ಹೊರಹಾಕಿದರು.

ಕೇರಳ ರಾಜ್ಯದಲ್ಲಿ ಇರುವಷ್ಟು ಅರಾಜಕತೆ, ಕಾರ್ಮಿಕರ ಸಮಸ್ಯೆಗಳು ಸೇರಿದಂತೆ ಸಮಸ್ಯೆಗಳ ಸರಮಾಲೆಯೇ ಇದೆ. ಅಲ್ಲಿ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ನಮ್ಮ ರಾಜ್ಯದ ವಿಚಾರದ ಬಗ್ಗೆ ಅವರು ಮಾತನಾಡುವುದು ಸರಿಯಲ್ಲ. ಕೇರಳದಲ್ಲಿರುವಂತಹ ಅರಾಜಕತೆ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂದು ಸಚಿವರು ತೀವ್ರ ವಾಗ್ದಾಳಿ ನಡೆಸಿದರು.

ಕೋಗಿಲು ವಿವಾದಿತ ಸ್ಥಳದಲ್ಲಿ ಎಷ್ಟು ಜನ ಮೂಲನಿವಾಸಿಗಳು, ಎಷ್ಟು ಜನ ವಲಸಿಗರು ಇದ್ದಾರೆ ಎಂಬುದನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಇಲ್ಲಿ 90 ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದರು ಎಂಬುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ 80-90 ಕುಟುಂಬಗಳಿಗೆ ಸರ್ಕಾರದಿಂದ ಮನೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಅರ್ಹರಿಗೆ ಮಾತ್ರ ಮನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾತಿ, ವರ್ಗ, ಸಮುದಾಯದ ಆಧಾರದ ಮೇಲೆ ಕೆಲಸ ಮಾಡುತ್ತಿಲ್ಲ. ಕೋಗಿಲು ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಎಲ್ಲಾ ಸಮುದಾಯದವರಿಗೂ ಸೇರಿದ ಅರ್ಹ ಕುಟುಂಬಗಳಿಗೆ ಮನೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆದರೆ, ಜಾತಿ, ಧರ್ಮ ರಾಜಕಾರಣ ಮಾಡುತ್ತಿರುವ ಬಿಜೆಪಿ ಈ ವಿಚಾರದಲ್ಲಿ ದ್ವೇಷ, ಸಂಘರ್ಷ ಉಂಟು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬೈರತಿ ಸುರೇಶ್ ಅವರು, ಮನೆಗಳನ್ನು ತೆರವುಗೊಳಿಸಿದರೂ ಬಿಜೆಪಿಯವರು ಟೀಕಿಸುತ್ತಾರೆ, ಮನೆ ಕೊಟ್ಟರೂ ಟೀಕಿಸುತ್ತಾರೆ. ಇದನ್ನು ಬಿಟ್ಟು ರಾಜ್ಯದ ಜನತೆಯ ಸಮಸ್ಯೆಗಳು ಅವರಿಗೆ ಬೇಕಿಲ್ಲ ಎಂದು ಕಿಡಿ ಕಾರಿದರು.

Related Posts

Leave a Reply

Your email address will not be published. Required fields are marked *