ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಬೆಂಗಳೂರಿನಲ್ಲಿ ಎಂಟು ಕೋಟಿ ರೂಪಾಯಿ ಮೌಲ್ಯದ 160 ಕೆಜಿ ‘ಖಾಟ್ ಎಲೆಗಳು’ ಎಂಬ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದೆ. 2018ರಲ್ಲಿ ಮಾದಕ ದ್ರವ್ಯಗಳು ಮತ್ತು ಮಾದಕ ವಸ್ತುಗಳ ಕಾಯ್ದೆಯಡಿ ಖಾಟ್ ಎಲೆಗಳನ್ನು ಮಾದಕ ವಸ್ತು ಎಂದು ಸೇರಿಸಲಾಗಿದೆ.
ಇತ್ತೀಚೆಗೆ ಮೈಸೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಆಗಿತ್ತು. ಕಳೆದ ವಾರಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಡ್ರಗ್ಸ್ ಫ್ಯಾಕ್ಟರಿಗಳನ್ನು ಜಪ್ತಿ ಮಾಡಿ 56 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಬುಧವಾರ ಮಾದಕ ವಸ್ತು ನಿಯಂತ್ರಣ ಮಂಡಳಿಯ ಬೆಂಗಳೂರು ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದ ಖಾಟ್ ಎಲೆಗಳ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ.
ಖಾಟ್ ಒಂದು ಹೂಬಿಡುವ ಪೊದೆ ರೀತಿ ಸಸ್ಯವಾಗಿದ್ದು, ಇದನ್ನು ವಿದೇಶಗಳಿಂದ ತರಿಸಿಕೊಂಡು ಭಾರತದ ಮೂಲಕ ಇತರ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಎನ್‌ಸಿಬಿ ಹೇಳಿದೆ. ಇಥಿಯೋಪಿಯಾದಿಂದ ಕೀನ್ಯಾ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಭಾರತ ಮಾರ್ಗವಾಗಿ ವಿದೇಶಗಳಿಗೆ ರವಾನೆ ಆಗುತ್ತಿತ್ತು. ಈ ಜಾಲ ಇಥಿಯೋಪಿಯಾ, ಕೀನ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿದೆ ಎಂದು ತಿಳಿಸಿದೆ.
2,100 ಕೆಜಿ ತೂಕದ 550ಕ್ಕೂ ಹೆಚ್ಚು ಖಾಟ್ ಎಲೆಗಳ ದಾಸ್ತಾನುಗಳನ್ನು ಉತ್ತರ ಅಮೆರಿಕ, ಯುರೋಪ್, ಕೊಲ್ಲಿ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯಕ್ಕೆ ದಂಧೆಕೋರರು ಕಳುಹಿಸಿದ್ದಾರೆ. ಬೆಂಗಳೂರಿನಲ್ಲಿ ಇದನ್ನು ಸಣ್ಣ ಪ್ರಮಾಣದಲ್ಲಿ ವಿತರಿಸುವ ಕೇಂದ್ರಗಳನ್ನು ನಿರ್ವಹಿಸುತ್ತಿದ್ದರು. ವಿದ್ಯಾರ್ಥಿ ಮತ್ತು ವೈದ್ಯಕೀಯ ವೀಸಾಗಳಡಿ ಭಾರತದಲ್ಲಿ ವಾಸಿಸುವ ಹಲವು ವಿದೇಶಿಗರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


