Thursday, January 01, 2026
Menu

ರಾಜ್ಯದಲ್ಲಿ ಕೋವಿಡ್‌ ಅಕ್ರಮ: ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ಜಸ್ಟಿಸ್‌ ಡಿ ಕುನ್ಹಾ ಆಯೋಗ

ರಾಜ್ಯದಲ್ಲಿ ಕೋವಿಡ್‌ ಅವಧಿಯಲ್ಲಿ ಸಂಭವಿಸಿದ ಸಾವುಗಳು ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಕುರಿತಂತೆ ತನಿಖೆ ನಡೆಸಿರುವ ನ್ಯಾ. ಜಾನ್‌ ಮೈಕಲ್‌ ಡಿ ಕುನ್ಹಾ ಆಯೋಗ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ.

ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಕೋವಿಡ್‌ ತನಿಖೆ ಕುರಿತ 684 ಕಡತ ಹಾಗೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ತನಿಖೆಯ 171 ಕಡತಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕುನ್ಹಾ ಹಸ್ತಾಂತರಿಸಿದ್ದು, ಈ ವರದಿಯನ್ನು ಸರ್ಕಾರ ಬಿಡುಗಡೆ ಮಾಡಬಹುದು ಎಂದು ತಿಳಿಸಿದ್ದಾರೆ.

ಕೋವಿಡ್‌ ಅವಧಿಯಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅಕ್ರಮ ವ್ಯವಹಾರ, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆ ತನಿಖೆ ನಡೆಸಲು ಆಗಸ್ಟ್‌ 2023ರಲ್ಲಿ ಹೈಕೋರ್ಟ್ ನಿವೃತ್ತ ನ್ಯಾ.ಜಾನ್ ಮೈಕೆಲ್ ಡಿ. ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚೆಯಾಗಿತ್ತು.

ಆಯೋಗವು 2024ರಲ್ಲಿ ಮೊದಲ ಮಧ್ಯಂತರ ವರದಿ, 2025ರ ಏಪ್ರಿಲ್‌ನಲ್ಲಿ 1,808 ಪುಟಗಳ ಎರಡನೇ ಮಧ್ಯಂತರ ವರದಿ ಸಲ್ಲಿಸಿತ್ತು. ಮೊದಲ ಮಧ್ಯಂತರ ವರದಿ ಆಧರಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ವಿಶೇಷ ತನಿಖಾ ತಂಡ ರಚಿಸಲು 2024ರ ನವೆಂಬರ್‌ನಲ್ಲಿ ಸಚಿವ ಸಂಪುಟ ತೀರ್ಮಾನಿಸಿತ್ತು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್‌ ನಿರ್ವಹಣೆ ಹೆಸರಲ್ಲಿ 167 ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಹಲವು ಅಧಿಕಾರಿಗಳ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ದೂರು ನೀಡಿದ್ದರು. 2024ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು.

ಈಗ ಆಯೋಗ ಅಂತಿಮ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಪಾರದರ್ಶಕತೆಯ ಅಗತ್ಯ ಗಮನದಲ್ಲಿಟ್ಟುಕೊಂಡು, ಸರ್ಕಾರ ವರದಿಗಳನ್ನು ಬಿಡುಗಡೆ ಮಾಡಲು ಪರಿಗಣಿಸಬಹುದು ಎಂದು ನ್ಯಾ. ಜಾನ್‌ ಮೈಕಲ್‌ ಡಿ ಕುನ್ಹಾ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *