ದಂಪತಿ ಮಾಟ ಮಂತ್ರ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಗಂಡ ಹೆಂಡತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಹೃದಯವಿರಾವಕ ಘಟನೆ ಅಸ್ಸಾಂನ ರ್ಬಿ ಆಂಗ್ಲಾಂಗ್ ಜಿಲ್ಲೆಯ ಬೆಲೋಗುರಿ ಮುಂಡಾ ಗ್ರಾಮದಲ್ಲಿ ನಡೆದಿದೆ.
ಮುಂಡಾ ಗ್ರಾಮದಲ್ಲಿ ದಂಪತಿ ಮಾಟಮಂತ್ರದಲ್ಲಿ ತೊಡಗಿದ್ದಾರೆ, ಇದರಿಂದಾಗಿ ಊರಿನಲ್ಲಿ ಅನಾರೋಗ್ಯ ಉಂಟಾಗಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಹೀಗಾಗಿ ಗುಂಪು ಕಟ್ಟಿಕೊಂಡು ಹೋಗಿ ಆ ದಂಪತಿಯನ್ನು ಸಜೀವ ದಹನ ಮಾಡಿದ್ದಾರೆ.
ಗ್ರಾಮಸ್ಥರ ಗುಂಪೊಂದು ದಂಪತಿಯನ್ನು ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಗಾರ್ಡಿ ಬಿರೋವಾ (43) ಮತ್ತು ಅವರ ಪತ್ನಿ ಮೀರಾ ಬಿರೋವಾ (33) ಹೀಗೆ ಬರ್ಬರವಾಗಿ ಕೊಲೆಯಾದವರು.
ಸಂಜೆ ಘಟನೆ ನಡೆದಿದ್ದು, ರಾತ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಹುತೇಕ ಇಡೀ ಗ್ರಾಮದ ಜನರು ಒಗ್ಗೂಡಿ ಈ ಕೃತ್ಯ ಮಾಡಿದ್ದು, ಯಾರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಆರಂಭಿಕ ತನಿಖೆಯ ಪ್ರಕಾರ, ಪತಿ ಮತ್ತು ಪತ್ನಿಯನ್ನು ಮೊದಲು ಥಳಿಸಿ ನಂತರ ಬೆಂಕಿ ಹಚ್ಚಲಾಯಿತು. ಅವರ ಮೂಳೆಗಳನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ ಎಂದು ಕರ್ಬಿ ಅಂಗ್ಲಾಂಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪುಷ್ಪರಾಜ್ ಸಿಂಗ್ ಹೇಳಿದ್ದಾರೆ.
ದುಷ್ಕರ್ಮಿಗಳು ಆರಂಭದಲ್ಲಿ ದಂಪತಿಯ ಮೇಲೆ ಮನೆಯೊಳಗೆ ಹಲ್ಲೆ ನಡೆಸಿದರು. ನಂತರ ಮನೆ ಸುಟ್ಟು ಭಸ್ಮವಾಯಿತು. ದಂಪತಿ ಬೆಂಕಿಯಲ್ಲಿ ಸುಟ್ಟು ಹೋದರು. ಬೆಂಕಿ ಹಚ್ಚಿದ ಎಲ್ಲಾ ಅಪರಾಧಿಗಳನ್ನು ಬಂಧಿಸಲು ಪೊಲೀಸರು ತನಿಖೆ ತೀವ್ರಗೊಳಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.


