Wednesday, December 31, 2025
Menu

ಪಡಿಕ್ಕಲ್, ಮಯಾಂಕ್ ಶತಕ: ಪುದುಚೇರಿ ಮಣಿಸಿದ ಕರ್ನಾಟಕ

devdutt padikkal

ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಸಿಡಿಸಿದ ಶತಕಗಳ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಪುದುಚೇರಿ ತಂಡವನ್ನು 67 ರನ್ ಗಳಿಂದ ಮಣಿಸಿದೆ.

ಜೈಪುರದಲ್ಲಿ ಬುಧವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿತು. ಕಠಿಣ ಗುರಿ ಬೆಂಬತ್ತಿದ ಪುದುಚೇರಿ ತಂಡ 50 ಓವರ್ ಗಳಲ್ಲಿ 296 ರನ್ ಗಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕದ ಸಂಘಟಿತ ದಾಳಿಗೆ ತತ್ತರಿಸಿದ ಪುದುಚೇರಿ ತಂಡ ರನ್ ಗಳಿಸಲು ಪರದಾಟ ನಡೆಸಿತು. ತಂಡದ ಪರ ನೆಯಾನ್ ಶ್ಯಾಮ್ ಕಂಗ್ಯಾನ್ (68) ಮತ್ತು ಜಯಂತ್ ಯಾದವ್ (58) ಅರ್ಧಶತಕ ಬಾರಿಸಿ ತಂಡದ ಪರ ಹೋರಾಟ ನಡೆಸಿದರೂ ಫಲ ಸಿಗಲಿಲ್ಲ. ಕರ್ನಾಟಕದ ಪರ ಮನ್ವಂತ್ ಕುಮಾರ್ 3 ವಿಕೆಟ್ ಕಬಳಿಸಿದರೆ, ವಿದ್ವತ್ ಕಾವೇರಪ್ಪ ಮತ್ತು ಕರುಣ್ ನಾಯರ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕರ್ನಾಟಕ ತಂಡ ಭರ್ಜರಿ ಫಾರ್ಮ್ ನಲ್ಲಿರುವ ಆರ್ ಸಿಬಿ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಮಯಾಂಕ್ ಅಗರ್ವಾಲ್ ವೈಯಕ್ತಿಕ ಶತಕಗಳಿಂದ ಬೃಹತ್ ಮೊತ್ತ ಕಲೆಹಾಕಿತು.

ದೇವದತ್ ಪಡಿಕ್ಕಲ್ ಮತ್ತು ಮಯಾಂಕ್ ಮೊದಲ ವಿಕೆಟ್ ಗೆ 228 ರನ್ ಗಳ ಜೊತೆಯಾಟದಿಂದ ಬೃಹತ್ ಮೊತ್ತದ ಜೊತೆಯಾಟ ನಿಭಾಯಿಸಿದರು.

ದೇವದತ್ ಪಡಿಕ್ಕಲ್ 116 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 315 ರನ್ ಬಾರಿಸಿ ಔಟಾದರು. ಇದು ಪ್ರಸಕ್ತ ಟೂರ್ನಿಯಲ್ಲಿ ಪಡಿಕ್ಕಲ್ ಗಳಿಸಿದ ಮೂರನೇ ಶತಕವಾಗಿದೆ.

ಮಯಂಕ್ ಅಗರ್ವಾಲ್ 124 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 132 ರನ್ ಗಳಿಸಿ ನಿರ್ಗಮಿಸಿದರು. ಇದು ಮಯಾಂಕ್ ಗೆ 2ನೇ ಶತಕವಾಗಿದೆ.

ನಂತರ ಬಂದ ಕರುಣ್ ನಾಯರ್ ಕೂಡ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾದರು. ಕರುಣ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 62 ರನ್ ಸಿಡಿಸಿ ಔಟಾಗದೇ ಉಳಿದರೆ ರವಿಚಂದ್ರನ್ 21 ಮತ್ತು ಅಭಿನವ್ ಮನೋಹರ್ 6 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 21 ರನ್ ಬಾರಿಸಿ ತಂಡದ ಮೊತ್ತ 350ರ ಗಡಿ ದಾಟಿಸಿದರು.

Related Posts

Leave a Reply

Your email address will not be published. Required fields are marked *