ಚಾಮರಾಜನಗರದಲ್ಲಿ ಹೆಚ್ಚಾಗಿರುವ ಹುಲಿಗಳ ಹಾವಳಿ ನಿಯಂತ್ರಣಕ್ಕೆ ನಡೆಯುತ್ತಿರುವ ಆಪರೇಷನ್ 5 ಟೈಗರ್ಸ್ ಕಾರ್ಯಾಚರಣೆಯಲ್ಲಿ ಮಂಗಳವಾರ ರಾತ್ರಿ ಒಂದು ಗಂಡು ಹುಲಿ ಸೆರೆ ಸಿಕ್ಕಿದೆ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಬೀಡುಬಿಟ್ಟಿರುವ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸಮೀಪ ಗಂಡು ಹುಲಿ ಕಾಣಿಸಿಕೊಂಡ ಬೆನ್ನಲ್ಲೇ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದ.ೆ
ನಂಜೇದೇವನಪುರ, ವೀರನಪುರ, ಆನೆ ಮಡುವಿನ ಕೆರೆ ಬಳಿ 5 ಹುಲಿಗಳಿವೆ ಎಂದು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ನಿನ್ನೆ ರಾತ್ರಿ ಗಂಡು ಹುಲಿ ಕಾಣಿಸಿಕೊಂಡ ಕೂಡಲೇ ಸಾಕಾನೆಗಳ ಸಹಾಯದಿಂದ ಅರಿವಳಿಕೆ ಕೊಟ್ಟು ಸೆರೆ ಹಿಡಿಯಲಾಗಿದೆ.
ಕೂಂಬಿಂಗ್ ಎಕ್ಸ್ಪರ್ಟ್ ಸುಗ್ರೀವ ಕರಾರುವಕ್ಕಾಗಿ ಹುಲಿಯ ವಾಸನೆ ಪತ್ತೆ ಹಚ್ಚಿ ತನ್ನ ಮಾವುತ ಶಂಕರ್ಗೆ ಸೂಚನೆ ನೀಡಿತ್ತು. ತಕ್ಷಣ ಸುಗ್ರೀವ ಆನೆಯ ಸಹಾಯದಿಂದ ಆನೆಮಡುವಿನ ಕೆರೆ ಪಕ್ಕ ನೀರು ಕುಡಿಯಲು ಬಂದ ಹುಲಿಗೆ ಪಶು ವೈದ್ಯರು ಅರಿವಳಿಕೆ ಕೊಟ್ಟರು. ಬಳಿಕ ಸೆರೆ ಹಿಡಿಯಲಾಯಿತು.
ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಒಂದೆಡೆ ಇದ್ದರೆ, ಈ ಗಂಡು ಹುಲಿ ಪ್ರತ್ಯೇಕವಾಗಿತ್ತು. ಇದರಿಂದ ನಂಜೇದೇವನಪುರದಲ್ಲಿ ಇದ್ದದ್ದು 5 ಅಲ್ಲ 6 ಹುಲಿ ಎಂಬಂತಾಗಿದೆ. ಕಲ್ಪುರದಲ್ಲಿ ಕಳೆದ ತಿಂಗಳು ಕ್ಯಾಮರಾ ಟ್ರ್ಯಾಪ್ನಲ್ಲಿ ಕ್ಯಾಪ್ಚರ್ ಆಗಿದ್ದ ದೊಡ್ಡ ಗಾತ್ರದ ಹುಲಿ ಇದಾಗಿದೆ ಎನ್ನಲಾಗಿದೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ 100ಕ್ಕೂ ಅಧಿಕ ಸಿಬ್ಬಂದಿ ಒಂದು ಹುಲಿಯನ್ನು ಸೆರೆ ಹಿಡಿದಿದ್ದು ಆಪರೇಷನ್ 5 ಟೈಗರ್ಸ್ (ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿಗಳು) ಕಾರ್ಯಾಚರಣೆ ಮುಂದುವರೆದಿದೆ.
ಡ್ರೋನ್ ಕ್ಯಾಮೆರಾ ಮೂಲಕ ಹುಲಿಗಳ ಪತ್ತೆ: ಹುಲಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅರಣ್ಯ ಇಲಾಖೆ ಚಾಮರಾಜನಗರದ ಜಿಲ್ಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದೇ ಕಾರ್ಯಾಚರಣೆಯಲ್ಲಿ ಕಳೆದ ವಾರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೊನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರು. ಈ ಹುಲಿಗೆ ಸುಮಾರು 7-8 ವರ್ಷ ವಯಸ್ಸಾಗಿತ್ತು.


