ವಿಭಜನೆಯ ರಾಜಕೀಯವನ್ನು ತಿರಸ್ಕರಿಸಿ, ಘನತೆಯ ರಾಜಕೀಯವನ್ನು ಸ್ವಾಗತಿಸೋಣ. ದ್ವೇಷವು ದ್ವೇಷವನ್ನು ಹೆಚ್ಚಿಸುತ್ತದೆ, ಮೌನವು ಅನ್ಯಾಯವನ್ನು ಸಮರ್ಥಿಸುತ್ತದೆ ಮತ್ತು ಸಂವಾದವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನೆನಪಿ ಡೋಣ. ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಸಂವಾದವು ನಮಗೆ ಧೈರ್ಯ, ಸ್ಪಷ್ಟತೆ ಮತ್ತು ಆತ್ಮಶಕ್ತಿಯನ್ನು ನೀಡುತ್ತಿರಲಿ. ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಗಳು, ದೇವಾಲಯಗಳು ಮತ್ತು ಸಾಮಾಜಿಕ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ, ನಾರಾಯಣ ಗುರುಗಳು ಶೋಷಿತರಿಗೆ ಸ್ವಾಭಿಮಾನ, ಜ್ಞಾನ ಮತ್ತು ನಾಯಕತ್ವದ ಗುಣವನ್ನು ಮರುಸ್ಥಾಪಿಸುವ ವೇದಿಕೆಯನ್ನು ಸೃಷ್ಟಿಸಿದರು. ಶಿಕ್ಷಣದ ಮೂಲಕ ವಿಮೋಚನೆ, ಸಂಘಟನೆಯ ಮೂಲಕ ಸಬಲೀಕರಣ ಎಂಬುದು ಅವರ ಸಾಮಾಜಿಕ ಪರಿವರ್ತನೆಯ ಸಿದ್ಧಾಂತವಾಗಿತ್ತು. ಆಧುನಿಕ ರಾಷ್ಟ್ರಗಳು ‘ಮಾನವ ಶಕ್ತಿ’ಯ ಬಗ್ಗೆ ಮಾತನಾಡುವ ಮೊದಲೇ, ಉದ್ದೇಶಪೂರ್ವಕ ಅಸಮಾನತೆಯನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಬಲ ಅಸ್ತ್ರ ಎಂದು ನಾರಾಯಣ ಗುರುಗಳು ವಾದಿಸಿದ್ದರು ಎಂದು ಸಿಎಂ ಹೇಳಿದರು.
ನಾರಾಯಣ ಗುರುಗಳು ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು. ಇದೇ ನಾರಾಯಣ ಗುರುಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂಥಾ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ ಎಂದರು.
ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿ ಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಮೆಚ್ಚುಗೆ ಸೂಚಿಸಿದರು.
ರಾಜಕಾರಣ ನೈತಿಕತೆಯಿಂದ ದೂರವಾಗುತ್ತಾ, ಧರ್ಮವು ನೈತಿಕತೆಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಆಯುಧವಾಗುತ್ತಿರುವ ಅಪಾಯದ ದಿನಗಳಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು.ಶಿವಗಿರಿ ಮಠ ‘ಜೀವಂತ ಸಂವಿ ಧಾನ’ದಂತೆ ಕಾರ್ಯನಿರ್ವಹಿಸುತ್ತಿದೆ. ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ ‘ಕೋಮು-ವಿರೋಧಿ’ ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ ‘ಸಂವಾದ’ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ ‘ಸಮಾನತೆ’ಯನ್ನು ಮತ್ತು ಸಾಂಕೇತಿಕತೆಗಿಂತ ‘ನೈತಿಕತೆ’ಯನ್ನು ಎತ್ತಿ ಹಿಡಿಯುತ್ತದೆ ಎಂದರು.
“ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ” ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು. ನಾರಾಯಣ ಗುರುಗಳು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅವರು ಅನ್ಯಾಯದ ಬೇರುಗಳನ್ನೇ ಕಿತ್ತೆಸೆದರು. “ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಸತ್ಯವನ್ನು ಘೋಷಿಸಿದರು ಎಂಬುದಾಗಿ ಮುಖ್ಯಮಂತ್ರಿ ಸ್ಮರಿಸಿದರು.
ಇದು ಕೇವಲ ಕಾವ್ಯಾತ್ಮಕ ಹೇಳಿಕೆಯಲ್ಲ. ಇದು ಜಾತಿ ತಾರತಮ್ಯ ಸೋಂಕಿನ ಮನುಸ್ಮೃತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆ, ಧಾರ್ಮಿಕ ಏಕಸ್ವಾಮ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ನೀಡಿದ ನೇರ ಸವಾಲಾಗಿತ್ತು. ಜಾತಿರಹಿತ, ಭಯರಹಿತ ಮತ್ತು ಮಾನವೀಯ ಸಮಾಜ ನಿರ್ಮಾಣದ ದೂರದೃಷ್ಟಿಯಾಗಿತ್ತು. ಹಿಂದುಳಿದ ಸಮುದಾಯಗಳು ತಮ್ಮದೇ ಆದ ದೇವಾಲಯಗಳನ್ನು ಸ್ಥಾಪಿಸಬೇಕೆಂದು ಕರೆ ನೀಡಿ, ದೇವಾಲಯಗಳಲ್ಲಿ ವಿಗ್ರಹದ ಬದಲು ಕನ್ನಡಿಯನ್ನು ಪ್ರತಿಷ್ಠಾಪಿಸಿದರು. ದೈವತ್ವವು ಪ್ರತಿ ಮನುಷ್ಯನೊಳಗೆ ನೆಲೆಸಿದ್ದು, ಆತ್ಮಸಾಕ್ಷಾತ್ಕಾರ, ಸಮಾನತೆ ಹಾಗೂ ಯಾರಿಗೂ ಕೇಡು ಬಯಸದಿರುವುದೇ ನಿಜವಾದ ಆರಾಧನೆ ಎಂದು ತಿಳಿಸುವುದು ಉದ್ದೇಶವಾಗಿತ್ತು ಎಂದರು.
ನಾರಾಯಣ ಗುರುಗಳ ಪ್ರಭಾವ ಕೇರಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 1925ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ ಅವರು ನಡೆಸಿದ ಐತಿಹಾಸಿಕ ಸಂವಾದವು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. “ಜಾತಿ ಎನ್ನುವುದು ಸಾಂಸ್ಕೃತಿಕ ವೈವಿಧ್ಯತೆಯಲ್ಲ, ಅದು ಸಾಂಸ್ಥಿಕ ಅನ್ಯಾಯ” ಎಂಬ ಮೂಲಭೂತ ಸತ್ಯವನ್ನು ಗಾಂಧೀಜಿಯವರು ಅರಿತುಕೊಳ್ಳುವಂತೆ ಮಾಡಿತು. ಮಾವಿನ ಮರದ ಎಲೆಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಾರ ಒಂದೇ ಎಂಬ ಉದಾಹರಣೆಯ ಮೂಲಕ, ಜಾತಿ ಮತ್ತು ಧರ್ಮಗಳು ಜಗತ್ತಿನ ಆಳವಾದ ಸಾಮಾಜಿಕ ಸಮಸ್ಯೆಗಳೇ ಹೊರತು ವೈವಿಧ್ಯತೆಯಲ್ಲ ಎಂದು ಗಾಂಧೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಸಿಎಂ ವಿವರಿಸಿದರು. ನಾರಾಯಣ ಗುರುಗಳನ್ನು ಭೇಟಿಯಾದ ನಂತರವೇ ಗಾಂಧೀಜಿಯವರು ಅಸ್ಪೃಶ್ಯತೆ, ಸರಳತೆ ಮತ್ತು ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವನ್ನು ಗಟ್ಟಿಗೊಳಿಸಿದರು. ಅಂತರ್ಜಾತಿ ವಿವಾಹವಲ್ಲದ ಮದುವೆಗಳಿಗೆ ತಾವು ಹಾಜರಾಗುವುದಿಲ್ಲ ಎಂದು ಗಾಂಧೀಜಿಯವರು ನಿರ್ಧರಿಸಿದ್ದು ಕಾಕತಾಳೀಯ ವಲ್ಲ ಎಂದರು.


