ಬೆಂಗಳೂರು ಹಸಿರು ಮೆಟ್ರೋ ಮಾರ್ಗಕ್ಕೆ ಹೊಸದಾಗಿ 21 ಅತ್ಯಾಧುನಿಕ ಡಿಟಿಜಿ ತಂತ್ರಜ್ಞಾನದ ಮೆಟ್ರೋ ರೈಲುಗಳು ಸೇರ್ಪಡೆಗೊಳ್ಳಲಿವೆ, ಇದರಿಂದ ಮೆಟ್ರೋ ಸಂಚಾರ ಇನ್ನಷ್ಟು ವೇಗ ಪಡೆಯಲಿದೆ. ಹಸಿರು ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವ 17 ರೈಲುಗಳನ್ನು ಹಂತ ಹಂತವಾಗಿ ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
33.5 ಕಿಲೋಮೀಟರ್ ಉದ್ದದ ಹಸಿರು ಮಾರ್ಗ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ವಿಸ್ತಾರಗೊಂಡಿದ್ದು, ಪ್ರತಿದಿನ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಈ ಮಾರ್ಗದಲ್ಲಿ ಹೊಸ ರೈಲುಗಳ ಸೇರ್ಪಡೆ ಆಗುವುದರಿಂದ ಪೀಕ್ ಸಮಯದ ದಟ್ಟಣೆ ತಗ್ಗಲಿದೆ.
2019–20ರಲ್ಲಿ ನಡೆದ ಒಪ್ಪಂದದಂತೆ ಡಿಟಿಜಿ ತಂತ್ರಜ್ಞಾನ ಹೊಂದಿರುವ 126 ಬೋಗಿಗಳನ್ನು ಒಳಗೊಂಡು 21 ಮೆಟ್ರೋ ರೈಲುಗಳು ಪೂರೈಕೆ ಆಗಲಿವೆ. ಈ ರೈಲುಗಳನ್ನು ಕೋಲ್ಕತ್ತಾದ ಟಿಟಾಘರ್ ರೈಲ್ ಸಿಸ್ಟಂ ಸಹಯೋಗದಲ್ಲಿ ಚೀನಾದ ಸಿಆರ್‌ಆರ್‌ಸಿ ಸಂಸ್ಥೆ ತಯಾರಿಸಿದೆ. ಒಂದು ಪ್ರೊಟೊಟೈಪ್ ರೈಲು ಚೀನಾದಿಂದ ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ಉಳಿದ 20 ರೈಲುಗಳು ಕೋಲ್ಕತ್ತಾದಿಂದ ಬರಲಿವೆ.
ಪ್ರೊಟೊಟೈಪ್ ರೈಲು ಕಳೆದ ಜನವರಿಯಲ್ಲೇ ನಗರ ತಲುಪಿದ್ದರೂ ತಾಂತ್ರಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಸೇವೆಗೆ ಸೇರಿಸಿರಲಿಲ್ಲ, ಈಗ ಹಸಿರು ಮಾರ್ಗಕ್ಕೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಆರ್‌ಡಿಎಸ್‌ಒ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಾಲಹಳ್ಳಿ–ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣದ ನಡುವೆ ರಾತ್ರಿ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಪರೀಕ್ಷಾ ಸಂಚಾರ ರಾತ್ರಿ 11.30ರಿಂದ ಬೆಳಗಿನ ಜಾವ 3.30ರವರೆಗೆ ನಡೆಯುತ್ತಿದೆ.
ಶೀಘ್ರವೇ ತಾಂತ್ರಿಕ ತಪಾಸಣೆ ಪೂರ್ಣಗೊಳ್ಳಲಿದ್ದು, ವಾಣಿಜ್ಯ ಸಂಚಾರ ಆರಂಭಿಸಲು ಆರ್‌ಡಿಎಸ್‌ಒ, ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತಾಲಯ ಹಾಗೂ ರೈಲ್ವೆ ಮಂಡಳಿಯ ಅನುಮೋದನೆ ಅಗತ್ಯವಿದೆ. ಮಾರ್ಚ್ ಅಂತ್ಯದೊಳಗೆ ಅನುಮತಿಗಳನ್ನು ಪಡೆಯುವ ವಿಶ್ವಾಸವಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಮೂರರಿಂದ ನಾಲ್ಕು ನಿಮಿಷಕ್ಕೊಮ್ಮೆ ಸಂಚಾರ ಕಾಯ್ದುಕೊಳ್ಳಲು ಪ್ರತಿ ಕಿಲೋಮೀಟರ್‌ಗೆ ಒಂದು ರೈಲು ಅಗತ್ಯವಿದೆ. ನೇರಳೆ ಮತ್ತು ಹಸಿರು ಮಾರ್ಗಗಳು 57 ರೈಲುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹೊಸ ರೈಲುಗಳ ಸೇರ್ಪಡೆಯಿಂದ ಈ ಅವಧಿ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.


